ಚೆನ್ನೈ: ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರ್ಜುನ್ ಇರಿಗೇಶಿ, ವಿದಿತ್ ಗುಜರಾತಿ ಮತ್ತು ಅನಿಶ್ ಗಿರಿ ಅವರು ಆಗಸ್ಟ್ 6ರಂದು ಆರಂಭವಾಗುವ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆಟಗಾರರಲ್ಲಿ ಒಳಗೊಂಡಿದ್ದಾರೆ.
ಭಾರತದ ಈ ಪ್ರತಿಷ್ಠಿತ ಟೂರ್ನಿಯ ಮಾಸ್ಟರ್ಸ್ ಮತ್ತು ಚಾಲೆಂಜರ್ಸ್ ವಿಭಾಗಗಳಲ್ಲಿ ಒಟ್ಟು 20 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಟೂರ್ನಿಯು ₹1 ಕೋಟಿ ಬಹುಮಾನ ನಿಧಿ ಹೊಂದಿದೆ.
ಆಟಗಾರರು ಇಲ್ಲಿ ಬಹುಮಾನದ ಜೊತೆ ಫಿಡೆ ಸರ್ಕಿಟ್ ಪಾಯಿಂಟ್‌ಗಳನ್ನೂ ಪಡೆಯಲಿದ್ದಾರೆ. ಇದು ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಯ ದೃಷ್ಟಿಯಿಂದ ಮಹತ್ವದ್ದು.
ಇರಿಗೇಶಿ, ವಿದಿತ್ ಎಸ್.ಗುಜರಾತಿ, ಗಿರಿ ಅವರ ಜೊತೆಗೆ ಜೋರ್ಡನ್ ವಾನ್ ಫೊರೀಸ್ಟ್, ಲಿಯಾಂಗ್ ಅವೊಂಡರ್, ವಿನ್ಸೆಂಟ್ ಕೀಮರ್, ರೇ ರಾಬ್ಸನ್, ವ್ಲಾದಿಮಿರ್ ಫೆಡೊಸೀವ್ ಮತ್ತು ವಿ.ಪ್ರಣವ್ ಮಾಸ್ಟರ್ಸ್ ವಿಭಾಗದಲ್ಲಿ ಆಡಲಿದ್ದಾರೆ. ಪ್ರಣವ್ ಹೋದ ಸಲ (2024) ಚಾಲೆಂಜರ್ಸ್ ವಿಭಾಗದ ಚಾಂಪಿಯನ್ ಆಗಿದ್ದರು.
ಕಳೆದ ವರ್ಷ ಚಾಲೆಂಜರ್ಸ್ ಕೆಟಗರಿಯನ್ನು ಪರಿಚಯಿಸಲಾಗಿತ್ತು. ಈ ಬಾರಿ ಈ ವಿಭಾಗದಲ್ಲಿ ಕಾರ್ತಿಕೇಯನ್ ಮುರಳಿ, ಲಿಯಾನ್ ಲ್ಯೂಕ್ ಮೆಂಡೋನ್ಸಾ, ವೈಶಾಲಿ ಆರ್., ದ್ರೋಣವಲ್ಲಿ ಹಾರಿಕ, ಅಭಿಮನ್ಯು ಪುರಾಣಿಕ್, ಆರ್ಯನ್ ಚೋಪ್ರಾ, ಭಾಸ್ಕರನ್ ಅಧಿಬನ್, ಇನಿಯನ್ ಪಿ, ದೀಪ್ತಾಯನ ಘೋಷ್ ಮತ್ತು ಪ್ರಾಣೇಶ್ ಎಂ. ಆಡಲಿದ್ದಾರೆ.
ಮಾಸ್ಟರ್ಸ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕ್ರಮವಾಗಿ ₹25 ಲಕ್ಷ, ₹15 ಲಕ್ಷ ಮತ್ತು ₹10 ಲಕ್ಷ ಬಹುಮಾನ ಪಡೆಯಲಿದ್ದಾರೆ. ಚಾಲೆಂಜರ್ಸ್ ವಿಭಾಗದ ವಿಜೇತ ಆಟಗಾರ ₹7 ಲಕ್ಷ ಜೇಬಿಗಿಳಿಸಲಿದ್ದಾರೆ. ಜೊತೆಗೆ 2026ರ ಮಾಸ್ಟರ್ಸ್ ಕೆಟಗರಿಯಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.