ADVERTISEMENT

ಗೆಲುವಿನೊಡನೆ ಎರಡನೇ ಸ್ಥಾನಕ್ಕೆ ಅರ್ಜುನ್

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ

ಪಿಟಿಐ
Published 9 ಆಗಸ್ಟ್ 2025, 21:50 IST
Last Updated 9 ಆಗಸ್ಟ್ 2025, 21:50 IST
ಚೆಸ್
ಚೆಸ್   

ಚೆನ್ನೈ : ವಿಶ್ವದ ಐದನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ ಅವರು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ರೇ ರಾಬ್ಸನ್‌ ಅವರನ್ನು ಮಣಿಸಿ ಕ್ವಾಂಟ್‌ಬಾಕ್ಸ್‌ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯ ಮೂರನೇ ಸುತ್ತಿನ ಬಳಿಕ ಏಕಾಂಗಿಯಾಗಿ ಎರಡನೇ ಸ್ಥಾನಕ್ಕೇರಿದರು.

ಒಂಬತ್ತು ಸುತ್ತುಗಳ ರೌಂಡ್‌ ರಾಬಿನ್ ಮಾದರಿಯ (ಕ್ಲಾಸಿಕಲ್‌ ಶೈಲಿಯ) ಈ ಟೂರ್ನಿಯಲ್ಲಿ ಇರಿಗೇಶಿ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಜರ್ಮನಿಯ ವಿನ್ಸೆಂಟ್‌ ಪರಿಪೂರ್ಣ ಮೂರು ಅಂಕ ಗಳಿಸಿದ್ದು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೀಮರ್‌ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಾರ್ತಿಕೇಯನ್ ಮುರಳಿ (1) ಅವರನ್ನು ಸೋಲಿಸಿದರು.

ಭಾರತದ ಇನ್ನೊಬ್ಬ ಅನುಭವಿ ಆಟಗಾರ ಜಿಎಂ ವಿದಿತ್ ಗುಜರಾತಿ (1.5) ಶುಕ್ರವಾರ ಎದುರಾದ ಸೋಲಿನಿಂದ ಚೇತರಿಸಿ ಮೂರನೇ ಸುತ್ತಿನಲ್ಲಿ ಸ್ವದೇಶದ ನಿಹಾಲ್ ಸರಿನ್ (0.5) ಅವರನ್ನು ಮಣಿಸಿದರು. 

ADVERTISEMENT

ಅಮೆರಿಕದ ಜಿಎಂ ಅವಾಂಡರ್ ಲಿಯಾಂಗ್ (1.5), ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಜೋರ್ಡನ್‌ ವಾನ್‌ ಫೊರೀಸ್ಟ್ (1) ವಿರುದ್ಧ ಜಯಗಳಿಸಿದರು. ಇದು ಅಮೆರಿಕದ ಆಟಗಾರನಿಗೆ ಟೂರ್ನಿಯಲ್ಲಿ ಮೊದಲ ಜಯ. 

ಟೂರ್ನಿಯ ಕಿರಿಯ ಆಟಗಾರರಲ್ಲಿ ಒಬ್ಬರಾದ 18 ವರ್ಷ ವಯಸ್ಸಿನ ವಿ. ಪ್ರಣವ್‌ (1), ಅನುಭವಿ ಗ್ರ್ಯಾಂಡ್‌ಮಾಸ್ಟರ್‌ ಅನಿಶ್‌ ಗಿರಿ (ನೆದರ್ಲೆಂಡ್ಸ್‌, 1.5) ಅವರನ್ನು ಡ್ರಾಕ್ಕೆ ಒಳಪಡಿಸಿದ್ದು ಗಮನ ಸೆಳೆಯಿತು.

ಚಾಲೆಂಜರ್ಸ್ ವಿಭಾಗದಲ್ಲಿ ಅಭಿಮನ್ಯು ಪುರಾಣಿಕ್‌ (2.5), ಸ್ವದೇಶದ ಜಿ.ಬಿ.ಹರ್ಷವರ್ಧನ್ (0.5) ಅವರನ್ನು ಸೋಲಿಸಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಪ್ರಾಣೇಶ್‌ (2.5), ಸ್ವದೇಶದ ಇನಿಯನ್‌ (1.5) ವಿರುದ್ಧ ಗೆಲುವು ಪಡೆದರು.

ಲಿಯಾನ್ ಮೆಂಡೋನ್ಸಾ (2), ಆರ್.ವೈಶಾಲಿ (1) ವಿರುದ್ಧ ಜಯಗಳಿಸಿದರು. ಉಳಿದೆರಡು ಪಂದ್ಯಗಳು ಡ್ರಾ ಆದವು. ಬಿ.ಅಧಿಬನ್‌ (1.5) ಅವರು ಡಿ.ಹಾರಿಕಾ (0.5) ಜೊತೆ, ಆರ್ಯನ್ ಚೋಪ್ರಾ (1), ದೀಪ್ತಾಯನ್ ಘೋಷ್‌ (2) ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.