ADVERTISEMENT

ಆಲ್ ಇಂಗ್ಲೆಂಡ್‌ ಚಾಂಪಿಯನ್‌ಷಿಪ್: ಕ್ವಾರ್ಟರ್‌ಗೆ ಲಕ್ಷ್ಯ ಸೇನ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:26 IST
Last Updated 14 ಮಾರ್ಚ್ 2024, 16:26 IST
<div class="paragraphs"><p>ಲಕ್ಷ್ಯ ಸೇನ್</p></div>

ಲಕ್ಷ್ಯ ಸೇನ್

   

ಬರ್ಮಿಂಗ್‌ಹ್ಯಾಮ್ : ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ನಿರಾಸೆ ಅನುಭವಿಸಿದರು.

ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ 22 ವರ್ಷದ ಸೇನ್‌ ಅವರು 24–22, 11–21, 21–14 ರಿಂದ ನಾಲ್ಕನೇ ಶ್ರೇಯಾಂಕದ ಆಂಡರ್ಸ್ ಆಂಟೊನ್‌ಸೆನ್ ಅವರಿಗೆ ಆಘಾತ ನೀಡಿದರು.

ADVERTISEMENT

ತೀವ್ರ ಪೈಪೋಟಿಯಲ್ಲಿ ಮೊದಲ ಗೇಮ್‌ ಗೆದ್ದ ಸೇನ್ ಅವರಿಗೆ ಎರಡನೇ ಗೇಮ್‌ನಲ್ಲಿ 26 ವರ್ಷದ ಡೆನ್ಮಾರ್ಕ್‌ ಆಟಗಾರ ತಿರುಗೇಟು ನೀಡಿ ಸಮಬಲ ಸಾಧಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಸೇನ್‌ ಮೇಲುಗೈ ಸಾಧಿಸಿ ಎಂಟರ ಘಟ್ಟ ಪ್ರವೇಶಿಸಿದರು.

ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಸೇನ್‌ ಹೊರತುಪಡಿಸಿ ಉಳಿದ ಭಾರತದ ಆಟಗಾರರಾದ ಎಚ್‌.ಎಸ್‌. ಪ್ರಣಯ್‌, ಕಿದಂಬಿ ಶ್ರೀಕಾಂತ್‌, ಪ್ರಿಯಾಂಶು ರಾಜಾವತ್‌ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.

ಎರಡು ಸಲದ ಒಲಿಂಪಿಕ್ ಪದಕ ವಿಜೇತೆ ಸಿಂಧು ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆ್ಯನ್‌  ಸೆ ಯಂಗ್ ವಿರುದ್ಧ ನೇರ ಗೇಮ್‌ಗಳ ಸೋಲನುಭವಿಸಿದ್ದಾರೆ.

ಸಿಂಧು ಅವರು ವಿಶ್ವದ ನಂ.1 ಕೊರಿಯಾದ ಆಟಗಾರ್ತಿಯ ವಿರುದ್ಧ ಕಠಿಣ ಹೋರಾಟ ನಡೆಸಿದರೂ ತಮ್ಮ ತಪ್ಪುಗಳನ್ನು ತಡೆಯಲು ವಿಫಲರಾದರು. 42 ನಿಮಿಷಗಳ ಹಣಾಹಣಿಯಲ್ಲಿ 19–21, 11–21 ಅಂತರದಿಂದ ಸೋತರು. 

ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದ ಕೊರಿಯಾದ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ  ಆ್ಯನ್‌ ಸೆ ಯಂಗ್ ವಿರುದ್ಧ ಸಿಂಧುಗೆ ಸತತ ಏಳನೇ ಸೋಲು ಇದಾಗಿದೆ.

ಕೊರಿಯಾದ ಆಟಗಾರ್ತಿ ಈ ಋತುವಿನಲ್ಲಿ ಮಲೇಷ್ಯಾ ಮತ್ತು ಫ್ರಾನ್ಸ್‌ ಟೂರ್ನಿ ಗೆದ್ದರೆ, ಸಿಂಧು ಎಡ ಮೊಣಕಾಲು ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನದ ಹಾದಿಯಲ್ಲಿದ್ದಾರೆ. 

 

ಯಂಗ್‌ಗೆ ಮೊದಲ ಸುತ್ತಿನ ಆರಂಭದಲ್ಲಿ ಸಿಂಧು ಪೈಪೋಟಿ ನೀಡುವಂತೆ ಕಂಡಿತ್ತು. ಆಗ ಸ್ಕೋರ್‌ 4–1 ಆಗಿತ್ತು. ಆದರೆ ತಿರುಗೇಟು ನೀಡಿದ 22 ವರ್ಷದ ಕೊರಿಯಾ ಆಟಗಾರ್ತಿ 11–8ರಲ್ಲಿ ಮುನ್ನಡೆ ಸಾಧಿಸಿದಲ್ಲದೇ, ಮೊದಲ ಗೇಮ್‌ ಜಯಿಸಿದರು. ಎರಡನೇ ಗೇಮ್‌ನಲ್ಲಿ ವಿರಾಮದ ನಂತರ  ಸಿಂಧು ತಪ್ಪುಗಳು ಹೆಚ್ಚುತ್ತಲೇ ಇದ್ದವು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.