ADVERTISEMENT

ಈಶ ಗ್ರಾಮೋತ್ಸವ: ಬಡಗನ್ನೂರು ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 23:48 IST
Last Updated 22 ಸೆಪ್ಟೆಂಬರ್ 2025, 23:48 IST
(ಎಡದಿಂದ) ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ.ಆರ್‌., ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಈಶ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಪ್ಯಾರಾಲಿಂಪಿಯನ್ ಭಾವಿನಾ ಪಟೇಲ್ ಅವರು 2025ರ ಆವೃತ್ತಿಯ ಗ್ರಾಮೋತ್ಸವ ‘ಗ್ರ್ಯಾಂಡ್‌ ಫಿನಾಲೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
(ಎಡದಿಂದ) ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ.ಆರ್‌., ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಈಶ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಪ್ಯಾರಾಲಿಂಪಿಯನ್ ಭಾವಿನಾ ಪಟೇಲ್ ಅವರು 2025ರ ಆವೃತ್ತಿಯ ಗ್ರಾಮೋತ್ಸವ ‘ಗ್ರ್ಯಾಂಡ್‌ ಫಿನಾಲೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡವು ಕೊಯಮತ್ತೂರಿನಲ್ಲಿ ಭಾನುವಾರ ಮುಕ್ತಾಯಗೊಂಡ 17ನೇ ಆವೃತ್ತಿಯ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ತಂಡವು ಪುರುಷರ ವಾಲಿಬಾಲ್‌ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆಯಿತು.

ಕ್ರೀಡಾಕೂಟದಲ್ಲಿ ಕರ್ನಾಟಕದ ತಂಡಗಳೇ ಪಾರಮ್ಯ ಸಾಧಿಸಿದ್ದು ಕಂಡುಬಂತು. ಬಡಗನ್ನೂರು ತಂಡವು ಫೈನಲ್‌ನಲ್ಲಿ ಆತಿಥೇಯ ಕೊಯಮತ್ತೂರು ಜಿಲ್ಲೆಯ ದೇವರಾಯಪುರಂ ತಂಡವನ್ನು ಸೋಲಿಸಿತು. ಹೆಗ್ಗಡಿಹಳ್ಳಿ ತಂಡವು ಪ್ರಶಸ್ತಿ ಸುತ್ತಿನಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಉತ್ತಮಸೋಲಾಪುರಂ ತಂಡದ ವಿರುದ್ಧ ಪರಾಭವಗೊಂಡಿತು.

ವಿಜೇತ ತಂಡಕ್ಕೆ ₹5 ಲಕ್ಷ ಹಾಗೂ ರನ್ನರ್‌ ಅಪ್ ತಂಡಕ್ಕೆ ₹3 ಲಕ್ಷ ಬಹುಮಾನ ವಿತರಿಸಲಾಯಿತು. ಅದರೊಂದಿಗೆ, ಎರಡು ತಿಂಗಳಿಂದ ನಡೆದ ದೇಶದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವಕ್ಕೆ ವಿಜೃಂಭಣೆಯ ತೆರೆಬಿತ್ತು.

ADVERTISEMENT

ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ.ಆರ್‌., ಪ್ಯಾರಾಲಿಂಪಿಯನ್ ಭಾವಿನಾ ಪಟೇಲ್ ಅವರು ‘ಗ್ರ್ಯಾಂಡ್‌ ಫಿನಾಲೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

‘ಇಷ್ಟು ದೊಡ್ಡಮಟ್ಟದ ಟೂರ್ನಿಯನ್ನು ಹೇಗೆ ಆಯೋಜಿಸಿದ್ದಾರೆಂದು ತಿಳಿಯುವ ಕುತೂಹಲದಿಂದ ಕಾರ್ಯಕ್ರಮಕ್ಕೆ ಬಂದಿರುವೆ’ ಎಂದು ಮಾಂಡವೀಯ ಅವರು ಹೇಳಿದರು.

‘ಗ್ರಾಮೋತ್ಸವವು ಕ್ರೀಡೆಯಷ್ಟೇ ಅಲ್ಲ. ದೇಶದ ಗ್ರಾಮೀಣ ಪ್ರದೇಶದ ಜನರ ಜೀವನವನ್ನು ಸಂಭ್ರಮಿಸುವ ಮತ್ತು ಪ್ರೋತ್ಸಾಹಿಸುವ ವಿಶೇಷ ಕಾರ್ಯಕ್ರಮವಾಗಿದೆ. ಈ ಕ್ರೀಡಾಕೂಟವನ್ನು 2028ರ ವೇಳೆಗೆ ದೇಶಾದ್ಯಂತ ವಿಸ್ತರಿಸುವ ಗುರಿ ನನ್ನದು’ ಎಂದು ಸದ್ಗುರು ಹೇಳಿದರು.

2025ರ ಆವೃತ್ತಿಯಲ್ಲಿ 12,000ಕ್ಕೂ ಅಧಿಕ ಮಹಿಳೆಯರು ಸೇರಿ ದೇಶಾದ್ಯಂತ ಒಟ್ಟು 63,220 ಆಟಗಾರರು ಪಾಲ್ಗೊಂಡರು ಎಂದು ಈಶ ಫೌಂಡೇಷನ್‌ ಪ್ರಕಟಣೆ ತಿಳಿಸಿದೆ.

2004ರಲ್ಲಿ ಆರಂಭವಾದ ಈಶ ಗ್ರಾಮೋತ್ಸವವು ಸಾಮಾಜಿಕ ಪರಿವರ್ತನೆಯ ಗುರಿಯನ್ನೂ ಹೊಂದಿದೆ. ಗ್ರಾಮೀಣ ಜನರು ಕ್ರೀಡೆಗಳಲ್ಲಿ ತೊಡಗುವುದರಿಂದ ವ್ಯಸನಗಳಿಂದ ಮುಕ್ತರಾಗಲು ಹಾಗೂ ಜಾತಿ–ಭೇದವನ್ನು ಮೀರಿ ಒಗ್ಗಟ್ಟಿನಿಂದ ಇರಲು ಸಾಧ್ಯವಿದೆ. ಈ ಕಾರ್ಯಕ್ರಮವು ಮಹಿಳಾ ಸಬಲೀಕರಣವನ್ನೂ ಪ್ರೋತ್ಸಾಹಿಸುತ್ತದೆ ಎಂದು ಹೇಳಿದೆ.

ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.