ADVERTISEMENT

ಕ್ರೀಡಾಪಟುಗಳ ಉತ್ಸಾಹ.....ಮೈದಾನದಲ್ಲಿ ಮೌನ..!

ಮೂಕ-ಕಿವಡ ಯುವಕರ ಕ್ರಿಕಟ್ ಪಂದ್ಯ

ಅನಿಲ್ ಬಾಚನಹಳ್ಳಿ
Published 19 ಮೇ 2019, 19:30 IST
Last Updated 19 ಮೇ 2019, 19:30 IST
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೂಗ ಹಾಗೂ ಕಿವುಡರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸನ್ನೆ ಭಾಷೆಯಲ್ಲಿ ಸಹ ಆಟಗಾರರನ್ನು ಹುರಿದುಂಬಿಸುತ್ತಿರುವುದು
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೂಗ ಹಾಗೂ ಕಿವುಡರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸನ್ನೆ ಭಾಷೆಯಲ್ಲಿ ಸಹ ಆಟಗಾರರನ್ನು ಹುರಿದುಂಬಿಸುತ್ತಿರುವುದು   

ಕ್ರೀಡಾಪಟುಗಳ ಉತ್ಸಾಹ ಮುಗಿಲು ಮುಟ್ಟಿತ್ತು. ಆದರೆ ಮೈದಾನದಲ್ಲಿ ಮಾತ್ರ ಮೌನ ಆವರಿಸಿತ್ತು. ಮೈದಾನದ ತುಂಬ ಕ್ರೀಡಾಪಟುಗಳು, ಪ್ರೇಕ್ಷಕರಿದ್ದರೂ ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಆದರೂ ಅವರ ನಡುವೆ ಸಂವಹನ ನಡೆಯುತ್ತಿತ್ತು. ಅದಕ್ಕೆ ಮಾತುಗಳ ರೂಪವಿರಲಿಲ್ಲ. ಅದರಲ್ಲಿ ಭಾವಗಳು ಶ್ರೀಮಂತವಾಗಿದ್ದವು.

ಸನ್ನೆಯ ಮೂಲಕವೇ ತಮ್ಮೆಲ್ಲ ಖುಷಿಯನ್ನು ಹೊರ ಹಾಕುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಇತ್ತು. 55 ಜನ ಕ್ರೀಡಾಪಟುಗಳೂ ಕೂಡಾ ಯಾವುದೇ ಶಬ್ಧ ಮಾಡದೇ ತಮ್ಮ ಆಟದಲ್ಲಿ ತಲ್ಲಿನರಾಗಿದ್ದರು. ತಮ್ಮ ಖುಷಿಯನ್ನು, ಭಾವನೆಗಳನ್ನು ಮೊಗದಲ್ಲಿಯೇ ತೋರಿಸುತ್ತಿದ್ದರು.

ಕೊಪ್ಪಳದ ಜಿಲ್ಲಾ ಕ್ರೀಂಡಾಗಣದಲ್ಲಿ ನಡೆದ ವಾಕ್ ಮತ್ತು ಶ್ರವಣದೋಷವಿರುವವರ ಕ್ರಿಕೆಟ್‌ ಟೂರ್ನಿಯ ದೃಶ್ಯಾವಳಿ ಇದು.

ADVERTISEMENT

ಸ್ವಂತ ಖರ್ಚಿನಲ್ಲಿಯೇ ಆಯೋಜನೆ

ಎಲ್ಲರಿಗೂ ಸರ್ಕಾರದ ವತಿಯಿಂದ ದಸಾರ ಹಾಗೂ ಇನ್ನಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಆದರೆ ಅಂಗವಿಕಲರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸರ್ಕಾರವೂ ಸ್ಥಳೀಯ ಮಟ್ಟದಲ್ಲಿ ಯಾವುದೇ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸುತ್ತಿಲ್ಲ. ಅದನ್ನು ಕೇಳಲೂ ಇವರಿಗೆ ಬಾಯಿ ಇಲ್ಲ.

ಇದರಿಂದ ಅಂಗವಿಕಲರಲ್ಲಿ ಪ್ರತಿಭೆಗ ಇದ್ದರೂ ಅದನ್ನು ಸರಿಯಾಗಿ ಗುರುತಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿರುವುದು ಸುಳ್ಳಲ್ಲ. ಆದರೆ ಅದನ್ನು ಸಾಬೀತು ಪಡಿಸಲೂ ತಮ್ಮ ಸ್ವಂತ ಖರ್ಚಿನಲ್ಲಿಯೇ ಚಿತ್ರದುರ್ಗ, ಹಾಸನ, ಕೊಪ್ಪಳ, ಬಳ್ಳಾರಿ, ಬೆಳಗಾವಿಯ ಮೂಗ ಮತ್ತು ಕಿವುಡ ಯುವಕರು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಯೋಜಿಸಿ, ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ಜಿಲ್ಲೆಗಳ ಯುವಕರು ತಾವೇ ಹಣ ಹಾಕಿಕೊಂಡು, ಒಂದೆಡೆ ಸೇರಿಕೊಂಡು ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಪಂದ್ಯಾವಳಿಗಾಗಿ ಯಾವುದೇ ದಾನಿಗಳ ಬಳಿಯೂ ಹಣ ಪಡೆದಿಲ್ಲ. ಸರ್ಕಾರದವರೂ ಸಹಕಾರ ನೀಡಿಲ್ಲ.

ಸ್ವತಃ ಬಳ್ಳಾರಿ ಜಿಲ್ಲೆಯ ಯುವಕರು ಉಪಾಹಾರ, ಗಂಗಾವತಿ ತಂಡದ ಯುವಕರು ಊಟದ ವ್ಯವಸ್ಥೆ ಕೈಗೊಂಡಿದ್ದರು. ಹೀಗೆ ಒಂದೊಂದರ ಖರ್ಚು ಒಂದೊಂದು ತಂಡ ವಹಿಸಿಕೊಂಡಿತ್ತು. ಆದರೆ ಎಲ್ಲ ತಂಡಗಳ ಯುವಕರು ಹಾಕಿದ ದುಡ್ಡಿನಿಂದ ಬಹುಮಾನ ಶೀಲ್ಡ್‌ ಮತ್ತು ಪದಕವನ್ನು ಖರೀದಿಸಿದ್ದರು.

ಸಾಧಾರಣವಾಗಿ ಎಲ್ಲರೂ 10 ಓವರ್‌ ಅಥವಾ 20 ಓವರ್‌ ಪಂದ್ಯ ಆಯೋಜಿಸುತ್ತಾರೆ. ಆದರೆ ಇದು 6 ಓವರ್‌ಗಳ ಪಂದ್ಯವಾಗಿತ್ತು. ಪ್ರತಿ ತಂಡವೂ ಪ್ರತಿ ತಂಡದವರು ಎರಡು ಪಂದ್ಯ ಆಡಿದರು. ಪ್ರತಿ ತಂಡದಲ್ಲಿ 12 ಜನ ಕ್ರೀಡಾಪಟುಗಳಿದ್ದರು. 28ರಂದು ಬೆಳಿಗ್ಗೆ 10ಕ್ಕೆ ಆರಂಭವಾಗಿ ಸಂಜೆ 6ಕ್ಕೆಟೂರ್ನಿ ಮುಕ್ತಾಯವಾಯಿತು. ಇವರನ್ನೆಲ್ಲ ಬೆಸೆದಿದ್ದು ಮೊಬೈಲ್ ಎಂದುಟೂರ್ನಿಯನೇತೃತ್ವ ವಹಿಸಿದ್ದ ಕ್ರೀಡಾಪಟು ಗಂಗಾವತಿಯ ಟಿ.ಶಶಿಕಾಂತ.

ಕಳೆದ ವರ್ಷ ಬಳ್ಳಾರಿಯಲ್ಲಿ ಆಯೋಜನೆ ಮಾಡಿದ್ದೆವು. ಈ ಬಾರಿ ಕೊಪ್ಪಳದಲ್ಲಿ ಆಯೋಜಿಸಲಾಗಿತ್ತು. ಮುಂದಿನ ಬಾರಿ ಎಲ್ಲಿ ಆಯೋಜಿಸಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ. ಬೇರೆ, ಬೇರೆ ಜಿಲ್ಲೆಗಳಲ್ಲಿ ನಮ್ಮಂತೆಯೇ ಇರುವ ಸ್ನೇಹಿತರು ಒಂದೆ ಕಡೆ ಸೇರುವ ಉದ್ದೇಶದಿಂದ ಈಟೂರ್ನಿ ಆಯೋಜಿಸುತ್ತಿದ್ದೇವೆ. ಈ ಮೂಲಕ ಮನರಂಜನೆಯನ್ನು ಪಡೆಯುತ್ತೇವೆ ಎಂದು ಶಶಿಕಾಂತ್‌ ಸನ್ನೆ ಭಾಷೆಯಲ್ಲಿಯೇ ವಿವರಿಸಿದರು.

ಚೆನ್ನಾಗಿ ಮಾತನಾಡುವ, ಸನ್ನೆ ಭಾಷೆ ಗೊತ್ತಿರುವ ಮೂವರು ಪಂದ್ಯದ ನಿರ್ಣಾಯಕರಾಗಿದ್ದೇವೆ. ಇದು ನಮಗೂ ಸಂತೋಷ ತಂದಿದೆ ಎಂದು ನಿರ್ಣಾಯಕ ಗಂಗಾವತಿಯ ರಿಯಾಜ್‌ ಹೇಳಿದರು.

ಚಿತ್ರದುರ್ಗಕ್ಕೆ ರೋಚಕ ಗೆಲುವು

ಚಿತ್ರದುರ್ಗ ಹಾಗೂ ಬೆಳಗಾವಿಯ ಮೂಗ ಮತ್ತು ಕಿವುಡರ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾದವು. ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅವಶ್ಯಕತೆ ಇತ್ತು. ಕೊನೆಯ ಎಸೆತವನ್ನು ಚಿತ್ರದುರ್ಗ ತಂಡದ ಬ್ಯಾಟ್ಸ್‌ಮನ್‌ ಬೌಂಡರಿ ಬಾರಿಸುವ ಮೂಲಕ ಚಿತ್ರದುರ್ಗ ತಂಡದ ಗೆಲುವಿಗೆ ಕಾರಣರಾದರು.

ಈ ಮೂಲಕ ಪ್ರಥಮ ಬಹುಮಾನ ₹ 4 ಸಾವಿರ ಹಾಗೂ ಶೀಲ್ಡ್‌ ವಿತರಿಸಲಾಯಿತು. ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿದ ಬೆಳಗಾವಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಮೂಲಕ ಎಲ್ಲ ತಂಡಗಳ ಕ್ರೀಡಾಪಟುಗಳು ಅಭಿನಂದನೆ ಸಲ್ಲಿಸಿ, 'ಮುಂದಿನ ವರ್ಷಕ್ಕೆ ಕಾಯೋಣ' ಎನ್ನುವ ಸಂದೇಶವನ್ನು ಸಂಜ್ಞೆ ಭಾಷೆಯಲ್ಲಿ ಸಾರಿದರು.

ಪ್ರಜಾವಾಣಿ ಚಿತ್ರಗಳು- ಭರತ್ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.