ADVERTISEMENT

ಅಥ್ಲೀಟ್‌ ಕಾಶಿನಾಥ್ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 14:53 IST
Last Updated 16 ಜುಲೈ 2020, 14:53 IST
ಕಾಶೀನಾಥ ನಾಯ್ಕ –ಫೇಸ್‌ಬುಕ್‌ ಚಿತ್ರ
ಕಾಶೀನಾಥ ನಾಯ್ಕ –ಫೇಸ್‌ಬುಕ್‌ ಚಿತ್ರ   

ಬೆಂಗಳೂರು: ಕರ್ನಾಟಕದ ಹಿರಿಯ ಅಥ್ಲೀಟ್‌ ಕಾಶಿನಾಥ್ ನಾಯ್ಕ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿರುವ ವ್ಯಕ್ತಿಯೊಬ್ಬ ಉದ್ಯೋಗದ ಆಮಿಷವೊಡ್ಡಿ ಹಲವರನ್ನು ವಂಚಿಸಲು ಪ್ರಯತ್ನಿಸಿದ್ದಾನೆ.

ಈ ಸಂಬಂಧ ಕಾಶಿನಾಥ್‌ ಅವರು ಪುಣೆಯ ಸೈಬರ್‌ ಅಪರಾಧ ಘಟಕಕ್ಕೆ ದೂರು ನೀಡಿದ್ದಾರೆ.

‘2019ರಲ್ಲಿ ನನ್ನ ಹೆಸರಲ್ಲಿ ಫೇಸ್‌ಬುಕ್‌ ಖಾತೆ ತೆರೆದಿದ್ದಉತ್ತರ ಪ್ರದೇಶದ ಅಮಿತ್ ಎಂಬ ವ್ಯಕ್ತಿಯು ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಚಂಡೀಗಡ ಹಾಗೂ ಕೇರಳದ ಇಬ್ಬರಿಂದ ಒಟ್ಟು ಹತ್ತು ಲಕ್ಷ ಹಣ ಪಡೆದು ವಂಚಿಸಿದ್ದ. ವಿಷಯ ಗೊತ್ತಾದ ಕೂಡಲೇ ಪುಣೆಯ ಸೈಬರ್‌ ಅಪರಾಧ ಘಟಕಕ್ಕೆ ದೂರು ನೀಡಿದ್ದೆ. ಅದಾಗಿ ಕೆಲವೇ ದಿನಗಳಲ್ಲಿ ಪೊಲೀಸರು ಆ ಖಾತೆ ಡಿಲೀಟ್‌ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಮಿತ್‌, ಇನ್‌ಸ್ಟಾಗ್ರಾಮ್‌ನಲ್ಲೂ ನನ್ನ ಹೆಸರಿನ ನಕಲಿ ಖಾತೆ ತೆರೆದಿದ್ದ. ನನ್ನ ಪರಿಚಯಸ್ಥರಿಗೆ ‘ಫ್ರೆಂಡ್‌ ರಿಕ್ವೆಸ್ಟ್‌’ ಕೂಡ ಕಳುಹಿಸಿದ್ದ. ಆ ವಿಷಯವನ್ನು ವಿದ್ಯಾರ್ಥಿಯೊಬ್ಬ ನನ್ನ ಗಮನಕ್ಕೆ ತಂದಿದ್ದ. ಅದಕ್ಕೆ ಈಗ ದೂರು ನೀಡಿದ್ದೇನೆ’ ಎಂದು ಕಾಶಿನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆತ ನನ್ನ ಹೆಸರಿನ ನಕಲಿ ಆಧಾರ್‌ ಕಾರ್ಡ್‌ ಕೂಡ ಹೊಂದಿದ್ದಾನೆ. ನನ್ನ ಪರಿಚಯಸ್ಥರೊಬ್ಬರು ಅದನ್ನು ತೋರಿಸಿದಾಗ ನಿಜಕ್ಕೂ ಆಘಾತವಾಗಿತ್ತು. ಆತ ಹೀಗೆಲ್ಲಾ ಮಾಡುತ್ತಿರುವುದರಿಂದ ಕೆಲವರು ನನಗೆ ಕರೆ ಮಾಡಿ ಉದ್ಯೋಗ ಕೊಡಿಸಿ ಇಲ್ಲವೇ ಹಣ ವಾಪಸ್‌ ನೀಡಿ ಎಂದು ಕೇಳುತ್ತಿದ್ದಾರೆ. ಅವರಿಗೆ ಉತ್ತರ ನೀಡಿ ಹೈರಾಣಾಗಿದ್ದೇನೆ. ಪೊಲೀಸರು ಕೂಡಲೇ ಆತನನ್ನು ಬಂಧಿಸಬೇಕು. ನನ್ನ ಹೆಸರು ಹೇಳಿಕೊಂಡು ಯಾರಾದರೂ ಆಮಿಷ ಒಡ್ಡಿದರೆ ಅದಕ್ಕೆ ಯಾರೂ ಸೊಪ್ಪು ಹಾಕಬಾರದು. ಹಾಗೊಮ್ಮೆ ವಂಚನೆಗೊಳಗಾದರೆ ಅದಕ್ಕೆ ನಾನು ಜವಾಬ್ದಾರನಲ್ಲ’ ಎಂದು ಅವರು ಹೇಳಿದರು.

37 ವರ್ಷ ವಯಸ್ಸಿನ ಕಾಶಿನಾಥ್‌ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಭಾರತೀಯ ಸೇನೆಯಲ್ಲಿ ಸುಬೇದಾರ್‌ ಆಗಿದ್ದು ಪುಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.