ADVERTISEMENT

ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್ ಸರಣಿಯ ಕುಸ್ತಿ: 5 ವರ್ಷದ ನಂತರ ಸಾಕ್ಷಿಗೆ ಚಿನ್ನ

ಪಿಟಿಐ
Published 4 ಜೂನ್ 2022, 2:43 IST
Last Updated 4 ಜೂನ್ 2022, 2:43 IST
ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್   

ಆಲ್ಮೇಟಿ: ಒಲಿಂಪಿಯನ್ ಸಾಕ್ಷಿ ಮಲಿಕ್ ಐದು ವರ್ಷಗಳ ನಂತರ ಅಂತರರಾಷ್ಟ್ರೀಯ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

ಕಜಕಸ್ತಾನದ ಅಲ್ಮೇಟಿಯಲ್ಲಿ ನಡೆಯುತ್ತಿರುವ ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್ ಸರಣಿಯ ಕುಸ್ತಿ ಸ್ಪರ್ಧೆಯಲ್ಲಿ ಶುಕ್ರವಾರ ಹರಿಯಾಣದ ಸಾಕ್ಷಿ ಆತ್ಮವಿಶ್ವಾಸದಿಂದ ಹಾಕಿದ ಪಟ್ಟುಗಳಿಗೆ ಸಿಹಿಫಲ ಲಭಿಸಿತು.

62 ಕೆಜಿ ಮಹಿಳೆಯರ ವಿಭಾಗದ ಬೌಟ್‌ನಲ್ಲಿ ಸಾಕ್ಷಿ ತಾಂತ್ರಿಕ ಉತ್ಕೃಷ್ಟತೆಯ ಆದಾರದಲ್ಲಿ ಕಜಕಸ್ತಾನದ ಐರಿನಾ ಕುಜ್ನೇತ್ಸೋವಾ ವಿರುದ್ಧ ಗೆದ್ದರು. ನಂತರದ ಸುತ್ತಿನಲ್ಲಿ ಉಜ್ಬೇಕಿಸ್ತಾನದ ರುಷಾನಾ ಅಬ್ದಿರಾಸುಲೊವಾ ವಿರುದ್ಧ 9–3ರಿಂದ ಗೆದ್ದರು. ಸೆಮಿಫೈನಲ್ ಪ್ರವೇಶಿಸಿದರು.

ADVERTISEMENT

ನಾಲ್ಕರ ಘಟ್ಟದಲ್ಲಿ ಮಂಗೋಲಿಯಾದ ಸರ್ನೆಚಿಮೆಡ್ ಸುಖೀ ಹಿಂದೆ ಸರಿದರು. ಇದರಿಂದಾಗಿ ಸಾಕ್ಷಿ ನಿರಾಯಾಸವಾಗಿ ಫೈನಲ್ ಪ್ರವೇಶಿಸಿದರು. ಅವರಿಗೆ ಪ್ರಶಸ್ತಿ ಸುತ್ತಿನಲ್ಲಿ ಮತ್ತೊಮ್ಮೆ ಕುಜ್ನೇತ್ಸೆವಾ ಎದುರಾದರು. ಆಪಾರ ಆತ್ಮವಿಶ್ವಾಸ ಮತ್ತು ಬಲಶಾಲಿ ಪಟ್ಟುಗಳನ್ನು ಹಾಕಿದ ಸಾಕ್ಷಿಯ ಸಾಮರ್ಥ್ಯಕ್ಕೆ ತಕ್ಕ ಎದುರೇಟು ನೀಡಲು ಕುಜ್ನೇತ್ಸೊವಗೆ ಸಾಧ್ಯವಾಗಲಿಲ್ಲ. ಸಾಕ್ಷಿ 7–4ರಿಂದ ಕುಜ್ನೇತ್ಸಾವಾಗೆ ಅವರ ತವರಿನಲ್ಲಿಯೇ ಸೋಲಿನ ರುಚಿ ತೋರಿಸಿದರು.

ಸಾಕ್ಷಿ ಡಬಲ್ ಲೆಗ್ ದಾಳಿಯ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು. 5–3ರ ಮುನ್ನಡೆಯಲ್ಲಿ ಪುಟಿದೇಳುವ ಯತ್ನ ಮಾಡಿದ ಕುಜ್ನೇತ್ಸೋವಾಗೆ ಸಾಕ್ಷಿ ದಿಟ್ಟ ತಿರುಗೇಟು ನೀಡಿದರು.

2017ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು. 2020 ಮತ್ತು 2022ರಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಗಳಿಸಿದ್ದರು.

57ಕೆಜಿ ವಿಭಾಗದಲ್ಲಿ ಭಾರತದ ಮಾನಸಿ ಫೈನಲ್ ಬೌಟ್‌ನಲ್ಲಿ 3–0ಯಿಂದ ಕಜಕಸ್ತಾನದ ಎಮಾ ಟಿಸಿನಾ ವಿರುದ್ಧ ಗೆದ್ದು, ಚಿನ್ನದ ಪದಕ ಗಳಿಸಿದರು.68 ಕೆಜಿ ವಿಭಾಗದಲ್ಲಿ ದಿವ್ಯಾಫೈನಲ್ ಬೌಟ್‌ನಲ್ಲಿ 10–14ರಿಂದ ಮಂಗೋಲಿಯಾದ ಬೊಲಾರ್‌ಟುಂಗಲಾಗ್ ಜಾರಿಗಾಟ್ ವಿರುದ್ಧ ಸೋತು ಪದಕಕ್ಕೆ ಕೊರ ಳೊಡ್ಡಿದರು.

ಗುರುವಾರ ಗ್ರಿಕೊ ರೋಮನ್ ಕುಸ್ತಿಯಲ್ಲಿ ನೀರಜ್ ಕಂಚಿನ ಪದಕ ಜಯಿಸಿದ್ದರು. ಇದರಿಂದಾಗಿ ಭಾರತದ ಖಾತೆಗೆ ಒಟ್ಟು ನಾಲ್ಕು ಪದಕ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.