ADVERTISEMENT

ಬ್ಯಾಸ್ಕೆಟ್‌ಬಾಲ್‌: ಆಸ್ಟ್ರೇಲಿಯಾಕ್ಕೆ ಸಾಟಿಯಾಗದ ಭಾರತ

ಫಿಬಾ ಏಷ್ಯನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 15:27 IST
Last Updated 6 ಸೆಪ್ಟೆಂಬರ್ 2022, 15:27 IST

ಬೆಂಗಳೂರು: ಆಸ್ಟ್ರೇಲಿಯಾ ಆಟಗಾರ್ತಿಯರ ವೇಗ ಮತ್ತು ಚಾಕಚಕ್ಯತೆಗೆ ಸಾಟಿಯಾಗುವಲ್ಲಿ ವಿಫಲವಾದ ಭಾರತ ತಂಡ, ಫಿಬಾ 18 ವರ್ಷದೊಳಗಿನ ಮಹಿಳಾ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಎ’ ಡಿವಿಷನ್‌ನ ಪಂದ್ಯದಲ್ಲಿ ಆಸ್ಟ್ರೇಲಿಯಾ 116– 49 ಪಾಯಿಂಟ್‌ಗಳಿಂದ ಜಯಿಸಿತು.

ಮೊದಲ ಕ್ವಾರ್ಟರ್‌ನಲ್ಲಿ 32–8ರ ಮೇಲುಗೈ ಸಾಧಿಸಿದ್ದ ಆಸ್ಟ್ರೆಲಿಯಾ, ವಿರಾಮದ ವೇಳೆಗೆ ಮುನ್ನಡೆಯನ್ನು 60–25ಕ್ಕೆ ಹಿಗ್ಗಿಸಿಕೊಂಡಿತು. ಆ ಬಳಿಕವೂ ಮೇಲಿಂದ ಮೇಲೆ ಪಾಯಿಂಟ್‌ ಕಲೆಹಾಕಿ ‘ಶತಕ’ದ ಗಡಿ ದಾಟಿತು.

ADVERTISEMENT

ಇಸಾಬೆಲ್‌ ಬೊರಿಯಸ್ 20 ಹಾಗೂ ಸೋಫಿ ಬರೊವ್ಸ್‌ ಅವರು 17 ಪಾಯಿಂಟ್ಸ್ ಗಳಿಸಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾದರು. ಆತಿಥೇಯ ತಂಡದ ಪರ ದೀಪ್ತಿ ರಾಜಾ (14) ಮತ್ತು ಸತ್ಯಾ ಕೃಷ್ಣಮೂರ್ತಿ (12) ಗಮನ ಸೆಳೆದರು.

ಇನ್ನೊಂದು ಪಂದ್ಯದಲ್ಲಿ ಕೊರಿಯಾ 81–64 ರಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು. ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ಕೊರಿಯಾ ತಂಡ ವಿರಾಮದ ವೇಳೆಗೆ 44–28 ರಲ್ಲಿ ಮುನ್ನಡೆ ಗಳಿಸಿತ್ತು. ನಾಯಕಿ ಜಿನ್‌ಯಂಗ್‌ ಪಾರ್ಕ್‌ ಅವರು 18 ಪಾಯಿಂಟ್ಸ್‌ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಚುರುಕಿನ ಆಟವಾಡಿದ ಚೀನಾ ತಂಡ ಇಂಡೊನೇಷ್ಯಾ ವಿರುದ್ಧ 91–30 ರಲ್ಲಿ ಭಾರಿ ಅಂತರದಿಂದ ಗೆದ್ದಿತು. ಡುವೊಲಿಂಗ್‌ ಹು (19) ಮತ್ತು ವೆನ್‌ಕ್ಸಿಯಾ ಲಿ (16) ಚೀನಾ ಪರ ಮಿಂಚಿದರು. ಜಪಾನ್‌ ತಂಡ 90–77 ರಲ್ಲಿ ಚೀನಾ ತೈಪೆ ತಂಡವನ್ನು ಮಣಿಸಿತು.

ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಡಿವಿಷನ್‌ ಪಂದ್ಯದಲ್ಲಿ ಥಾಯ್ಲೆಂಡ್ 124–31 ರಲ್ಲಿ ಮಾಲ್ಡೀವ್ಸ್‌ ವಿರುದ್ಧ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.