ADVERTISEMENT

ಸಿಂದರೋವ್‌ಗೆ ವಿಶ್ವಕಪ್ ಕಿರೀಟ: ಈ ಗೌರವಕ್ಕೆ ಪಾತ್ರರಾದ ಅತಿ ಕಿರಿಯ ಆಟಗಾರ

ಪಿಟಿಐ
Published 26 ನವೆಂಬರ್ 2025, 16:09 IST
Last Updated 26 ನವೆಂಬರ್ 2025, 16:09 IST
ಸಿಂದರೋವ್ (ಎಡಗಡೆ) ಮತ್ತು ವೇಯಿ ಯಿ
ಫಿಡೆ ಚಿತ್ರ
ಸಿಂದರೋವ್ (ಎಡಗಡೆ) ಮತ್ತು ವೇಯಿ ಯಿ ಫಿಡೆ ಚಿತ್ರ   

ಪಣಜಿ: ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ ಅವರು ವೇಗದ ಆಟಗಳ ಟೈಬ್ರೇಕರ್‌ನಲ್ಲಿ ಚೀನಾದ ವೇಯಿ ಯಿ ಅವರನ್ನು ಸೋಲಿಸಿ ಫಿಡೆ ಚೆಸ್‌ ವಿಶ್ವಕಪ್‌ ಗೆದ್ದುಕೊಂಡರು. 19 ವರ್ಷ ವಯಸ್ಸಿನ ಸಿಂದರೋವ್‌ ವಿಶ್ವಕಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೂ ಭಾಜನರಾದರು.

ಇವರಿಬ್ಬರ ನಡುವಣ ಎರಡು ಕ್ಲಾಸಿಕಲ್ ಆಟಗಳು ಡ್ರಾ ಆಗಿ ಸ್ಕೋರ್ 1–1 ಸಮಬಲವಾಗಿತ್ತು. ಟೈಬ್ರೇಕರ್‌ನಲ್ಲಿ ವೇಯಿ ಯಿ ಅವರು ಮೊದಲ ಆಟವನ್ನು ಸುಲಭವಾಗಿ ಡ್ರಾ ಮಾಡಿಕೊಂಡರು. ಆದರೆ ಉಜ್ಬೇಕಿಸ್ತಾನದ ಆಟಗಾರ ಕಪ್ಪು ಕಾಯಿಗಳಲ್ಲಿ ಆಡಿ ಎದುರಾಳಿಯ ರಕ್ಷಣೆ ಭೇದಿಸಿ 60 ನಡೆಗಳಲ್ಲಿ ಎರಡನೇ ಆಟ ಗೆದ್ದುಕೊಂಡು ಒಟ್ಟು 2.5–1.5 ರಿಂದ ಪಂದ್ಯ ಗೆದ್ದರು. 

ಸಿಂದರೋವ್ ಅವರು ವಿಶ್ವನಾಥನ್ ಆನಂದ್ ಟ್ರೋಫಿಯ ಜೊತೆ ₹1.07 ಕೋಟಿ ಬಹುಮಾನ ತಮ್ಮದಾಗಿಸಿಕೊಂಡರು. ನಾಕೌಟ್‌ ಮಾದರಿಯ ಈ ಟೂರ್ನಿಯಲ್ಲಿ ಉಜ್ಬೇಕಿಸ್ತಾನದ ಆಟಗಾರ 16ನೇ ಶ್ರೇಯಾಂಕ ಪಡೆದಿದ್ದರು. ಚೀನಾದ ಆಟಗಾರ ಸುಮಾರು ₹76 ಲಕ್ಷ ಬಹುಮಾನ ಗಳಿಸಿದರು.

ADVERTISEMENT

ಸಿಂದರೋವ್ ಮತ್ತು ವೇಯಿ ಯಿ ಇಬ್ಬರೂ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮೂರನೇ ಸ್ಥಾನ ಪಡೆದ ರಷ್ಯಾದ ಇಸಿಪಂಕೊ ಅವರೂ ಸೈಪ್ರಸ್‌ನಲ್ಲಿ ಮುಂದಿನ ಫೆಬ್ರವರಿ–ಮಾರ್ಚ್‌ನಲ್ಲಿ ನಿಗದಿಯಾಗಿರುವ ಎಂಟು ಆಟಗಾರರ ಟೂರ್ನಿಯಲ್ಲಿ ಆಡುವ ಅವಕಾಶ ಗಳಿಸಿದ್ದಾರೆ.

ಸದ್ಯ ಈ ಮೂವರ ಜೊತೆ (ಸಿಂದರೋವ್‌, ವೇಯಿ ಯಿ, ಇಸಿಪೆಂಕೊ) ಜೊತೆ ಅಮೆರಿಕದ ಫ್ಯಾಬಿಯಾನೊ ಕರುವಾನ, ನೆದರ್ಲೆಂಡ್ಸ್‌ನ ಅನಿಶ್ ಗಿರಿ, ಜರ್ಮನಿಯ ಮಥಾಯಿಸ್‌ ಬ್ಲೂಬಾಮ್ ಅವರೂ ಅರ್ಹತೆ ಗಳಿಸಿದ್ದಾರೆ. ಚೆಸ್‌ ಸರ್ಕಿಟ್‌ನಲ್ಲಿ ಉತ್ತಮ ಸಾಧನೆ ತೋರಿರುವ ಭಾರತದ ಪ್ರಜ್ಞಾನಂದ ಮತ್ತು ಜಪಾನ್‌ನ ಹಿಕಾರು ನಕಾಮುರಾ ಅವರೂ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.

ನೊದಿರ್ಬೆಕ್ ಅಬ್ದುಸತ್ತಾರೋವ್ ನಂತರ ಸಿಂದರೋವ್ ಅವರು ಉಜ್ಬೇಕಿಸ್ತಾನದ ಎರಡನೇ ಪ್ರಮುಖ ಆಟಗಾರ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.