ADVERTISEMENT

ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿ: ಅರ್ಜನ್‌, ಗುಕೇಶ್‌ಗೆ ಮೊದಲ ಎರಡು ಶ್ರೇಯಾಂಕ

ಪಿಟಿಐ
Published 8 ಜುಲೈ 2025, 16:18 IST
Last Updated 8 ಜುಲೈ 2025, 16:18 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ಭಾರತದ ಚೆಸ್‌ ತಾರೆಗಳಾದ ಅರ್ಜುನ್ ಇರಿಗೇಶಿ ಮತ್ತು ಡಿ.ಗುಕೇಶ್ ಅವರು ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ಸೆ. 3 ರಿಂದ 16 ರವರೆಗೆ ನಡೆಯಲಿರುವ ನಾಲ್ಕನೇ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯಲ್ಲಿ ಕ್ರಮವಾಗಿ ಮೊದಲ ಎರಡು ಶ್ರೇಯಾಂಕ ಪಡೆದಿದ್ದಾರೆ.

ಈ ಪ್ರತಿಷ್ಠಿತ ಟೂರ್ನಿಯ ಓಪನ್ ಮತ್ತು ಮಹಿಳಾ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಪಡೆಯುವವರು ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ. 2026ರ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಎಂಟು ಮಂದಿ ಆಡಲಿದ್ದು, ವಿಜೇತ ಆಟಗಾರ ವಿಶ್ವ ಚಾಂಪಿಯನ್‌ಗೆ ಚಾಲೆಂಜರ್ ಆಗಲಿದ್ದಾರೆ.

ಇದರಲ್ಲಿ ಆಡುವ ಆಟಗಾರ ಜುಲೈ 2024 ರಿಂದ ಜೂನ್ 2025ರ ಮಧ್ಯೆ 30ಕ್ಕಿಂತ ಹೆಚ್ಚು ಕ್ಲಾಸಿಕಲ್‌ ರೇಟೆಡ್‌ ಪಂದ್ಯಗಳನ್ನು ಆಡಿರಬೇಕು. ಮಾಜಿ ವಿಶ್ವ ಚಾಂಪಿಯನ್ನರಾದ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ವಿಶ್ವನಾಥನ್ ಆನಂದ್‌ ಹೀಗಾಗಿ ಆಡುತ್ತಿಲ್ಲ. 

ADVERTISEMENT

ಮಾಜಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್‌ ಕೂಡ ಈ ಬಾರಿ ಆಡುತ್ತಿಲ್ಲ. ಈ ಹಿಂದಿನ ಮೂರು ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಗಳಲ್ಲಿ ಆಡಿದ್ದ ಅಮೆರಿಕದ ಫ್ಯಾಬಿಯಾನೊ ಕರುವಾನ ಸಹ ಆಡುತ್ತಿಲ್ಲ. ಅವರು 2024ರ ಫಿಡೆ ಸರ್ಕಿಟ್‌ ವಿಜೇತರಾಗಿರುವ ಕಾರಣ ಈಗಾಗಲೇ ಕ್ಯಾಂಡಿಡೇಟ್ಸ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಿ ಆಗಿದೆ.

ಇರಿಗೇಶಿ ಮೊದಲನೇ, ಗುಕೇಶ್‌ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಭಾರತದ ಇನ್ನೊಬ್ಬ ಪ್ರತಿಭಾವಂತ ಆಟಗಾರ ಪ್ರಜ್ಞಾನಂದ ನಾಲ್ಕನೇ ಶ್ರೇಯಾಂಕ ಗಳಿಸಿದ್ದಾರೆ. ಆತಿಥೇಯ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಮೂರನೇ ಹಾಗೂ ವಿಶ್ವದ ಎಂಟನೇ ಕ್ರಮಾಂಕದ ಆಟಗಾರ ಅಲಿರೇಝಾ ಫಿರೋಝ್‌ಜಾ ಅವರು ಐದನೇ ಶ್ರೇಯಾಂಕ ಗಳಿಸಿದ್ದಾರೆ.

ವಿಶ್ವ ಚಾಂಪಿಯನ್‌ ಪಟ್ಟಕ್ಕೆ ಎರಡು ಬಾರಿ ಚಾಲೆಂಜರ್ ಆಗಿದ್ದ ಇಯಾನ್‌ ನಿಪೊಮ್‌ನಿಷಿ, ಅನಿಶ್‌ ಗಿರಿ, ಶಖ್ರಿಯಾರ್‌ ಮೆಮೆದ್ಯರೋವ್‌, ಲೆವೊನ್ ಅರೋನಿಯನ್ ಮತ್ತು ವ್ಲಾದಿಮಿರ್‌ ಫೆಡೊಸೀವ್‌ ಕ್ರಮವಾಗಿ ಆರರಿಂದ ಹತ್ತರವರೆಗಿನ ಶ್ರೇಯಾಂಕ ಗಳಿಸಿದ್ದಾರೆ.

2023ರ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯನ್ನು ಭಾರತದ ವಿದಿತ್ ಗುಜರಾತಿ (ಓಪನ್‌ ವಿಭಾಗ) ಮತ್ತು ಆರ್‌.ವೈಶಾಲಿ (ಮಹಿಳೆಯರ ವಿಭಾಗ) ಗೆದ್ದುಕೊಂಡಿದ್ದರು.

11 ಸುತ್ತುಗಳ ಈ ಟೂರ್ನಿಯಲ್ಲಿ 172 ಮಂದಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ 116 ಮಂದಿ ಓಪನ್ ಮತ್ತು 56 ಮಂದಿ ಮಹಿಳಾ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಈ ಟೂರ್ನಿಯ ಬಹುಮಾನ ನಿಧಿಯಲ್ಲೂ ಕಳೆದ ಬಾರಿಗಿಂತ ಗಮನಾರ್ಹ ಹೆಚ್ಚಳವಾಗಿದೆ. ಬಹುಮಾನ ಮೊತ್ತವನ್ನು ಓಪನ್ ವಿಭಾಗದಲ್ಲಿ ₹5.35 ಕೋಟಿಗೆ (2023ರಲ್ಲಿ ₹ಕೋಟಿ) ಹೆಚ್ಚಿಸಲಾಗಿದೆ. ಮಹಿಳಾ ವಿಭಾಗದಲ್ಲಿ ₹1.19 ಕೋಟಿಯಿಂದ (2023) ಈ ಬಾರಿ ₹2 ಕೋಟಿಗೆ ಏರಿಸಲಾಗಿದೆ. ಈ ಬಾರಿ ಯುವ ಪ್ರತಿಭೆಗಳಾದ ಹ್ಯಾನ್ಸ್ ನೀಮನ್ (22), ವಿನ್ಸೆಂಟ್‌ ಕೀಮರ್ (20), ಜಾವೊಖಿರ್‌ ಸಿಂಧರೋವ್‌ (19)

ಓಪನ್ ವಿಭಾಗದ 116 ಆಟಗಾರರಲ್ಲಿ 101 ಮಂದಿ ಈಗಾಗಲೇ ರೇಟಿಂಗ್ ಆಧಾರದಲ್ಲಿ ಅರ್ಹತೆ ಪಡೆದಿದ್ದಾರೆ. ಉಳಿದ ಆರು ಸ್ಥಾನಗಳನ್ನು ಫಿಡೆ ವೈಲ್ಡ್‌ಕಾರ್ಡ್ ಮೂಲಕ ತುಂಬಲಾಗುವುದು. ಮಾಜಿ ಚಾಂಪಿಯನ್ ಬೋರಿಸ್‌ ಗೆಲ್‌ಫಾಂಡ್‌ ಮತ್ತು ಮಹಿಳಾ ವಿಭಾಗದ ಮಾಜಿ ಚಾಲೆಂಜರ್ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರು ಓಪನ್ ವಿಭಾಗದಲ್ಲಿ ವೈಲ್ಡ್‌ ಕಾರ್ಡ್‌ ಪಡೆದಿದ್ದಾರೆ.

ಮಹಿಳಾ ವಿಭಾಗ:
ಮಹಿಳಾ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ತಾನ್‌ ಝೊಂಗ್ವಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅನುಭವಿಗಳಾದ ಕೋನೇರು ಹಂಪಿ, ಅನ್ನಾ ಮುಝಿಚುಕ್‌ ಮತ್ತು ಕ್ಯಾತರಿಕಾ ಲಾಗ್ನೊ ಕೂಡ ಶ್ರೇಯಾಕಿತರಲ್ಲಿ ಸೇರಿದ್ದಾರೆ.

44 ಮಂದಿ ರೇಟಿಂಗ್ ಆಧಾರದಲ್ಲಿ ನೇರವಾಗಿ ಅರ್ಹತೆ ಪಡೆದಿದ್ದಾರೆ. ಖಂಡಗಳಿಂದ ನಾಲ್ಕು ಮಂದಿ ಆಟಗಾರ್ತಿಯರು ಫಿಡೆ ವೈಲ್ಡ್‌ ಕಾರ್ಡ್ ಪಡೆದು ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.