ಮಂಗಳೂರು: ರೋಚಕ ‘ನಡೆ’ಗಳಿಗೆ ಸಾಕ್ಷಿಯಾದ ಕೊನೆಯ ಸುತ್ತಿನಲ್ಲಿ ಡ್ರಾ ಸಾಧಿಸುವ ಮೂಲಕ ಗೋವಾದ ನಿತೀಶ್ ಬೇಳೂರ್‌ಕರ್ ಇಲ್ಲಿ ಭಾನುವಾರ ನಡೆದ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್ ಅಂತರರಾಷ್ಟ್ರೀಯ ರ‍್ಯಾಪಿಡ್ ಚೆಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ನಗರದ ಶಾರದಾ ಕಾಲೇಜು ಆವರಣದಲ್ಲಿ ರಾವ್ಸ್ ಚೆಸ್ ಕಾರ್ನರ್ ಆಯೋಜಿಸಿದ್ದ ಟೂರ್ನಿಯ 9 ಸುತ್ತುಗಳಲ್ಲಿ ನಿತೀಶ್ 8.5 ಪಾಯಿಂಟ್ ಕಲೆ ಹಾಕಿದರು. ಒಬ್ಬರು ಗ್ರ್ಯಾಂಡ್‌ಮಾಸ್ಟರ್ ಮತ್ತು ಏಳು ಮಂದಿ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳು (ಐಎಂ) ಪಾಲ್ಗೊಂಡಿದ್ದ ಟೂರ್ನಿಯ ಕೊನೆಯ ಸುತ್ತಿನಲ್ಲಿ ಐಎಂ ನಿತೀಶ್ ಮತ್ತು ಐಎಂ ಪಶ್ಚಿಮ ಬಂಗಾಳದ ಸಂಕೇತ್ ಚಕ್ರವರ್ತಿ ನಡುವಿನ ಹೋರಾಟ ಕುತೂಹಲ ಕೆರಳಿಸಿತ್ತು. ಪಂದ್ಯ ಡ್ರಾ ಆಗುವುದರೊಂದಿಗೆ ಸಂಕೇತ್ 8 ಪಾಯಿಂಟ್‌ಗಳಿಗೆ ಸಮಾಧಾನಪಟ್ಟುಕೊಂಡು ರನ್ನರ್ ಅಪ್ ಆದರು. ಇವರಿಬ್ಬರೂ ಟೂರ್ನಿಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಶ್ರೇಯಾಂಕ ಹೊಂದಿದ್ದಾರೆ.
ಐಎಂ, ಕೇರಳದ ರತ್ನಾಕರನ್, ಗ್ರ್ಯಾಂಡ್ ಮಾಸ್ಟರ್ ತಮಿಳುನಾಡಿನ ಲಕ್ಷ್ಮಣ್ ಆರ್.ಆರ್ ಮತ್ತು ಅರೆನಾ ಐಎಂ ಕೇರಳದ ಕ್ರಿಸ್ಟಿ ಜಾರ್ಜ್ ಕೂಡ 8 ಪಾಯಿಂಟ್ ಗಳಿಸಿದರು. ಆದರೆ ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಇವರು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು. ಐಎಂಗಳಾದ ತಮಿಳುನಾಡಿನ ಸೆಂಥಿಲ್ ಮಾರನ್ ಕೆ ಏಳನೇ ಸ್ಥಾನ, ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್ 10ನೇ ಸ್ಥಾನ, ತಮಿಳುನಾಡಿನ ಸರವಣ ಕೃಷ್ಣ 34 ಹಾಗೂ ಮುರಳಿಕೃಷ್ಣ 35ನೇ ಸ್ಥಾನಕ್ಕೆ ಕುಸಿದರು.
ನಾಲ್ಕನೇ ಶ್ರೇಯಾಂಕಿತ ಲಕ್ಷ್ಮಣ್ ಆರ್.ಆರ್ ಕೊನೆಯ ಸುತ್ತಿನಲ್ಲಿ ಕೇರಳದ ಅಬ್ದುಲ್ಲ ನಿಸ್ತರ್ ವಿರುದ್ಧ, ರತ್ನಾಕರನ್ ಮಹಾರಾಷ್ಟ್ರದ ಆದಿತ್ಯ ಸಾವಳ್ಕರ್ ವಿರುದ್ಧ, ಕ್ರಿಸ್ಟಿ ಜಾರ್ಜ್ ತಮಿಳುನಾಡಿನ ದಿನೇಶ್ ಕುಮಾರ್ ಜಗನ್ನಾಥನ್ ವಿರುದ್ಧ, ದಕ್ಷಿಣ ಕನ್ನಡದ ಲಕ್ಷಿತ್ ಬಿ. ಸಾಲಿಯಾನ್ ಕೇರಳದ ಸಿದ್ಧಾರ್ಥ ಮೋಹನ್ ವಿರುದ್ಧ, ಕರ್ನಾಟಕದ ಅದ್ವೈತ್ ರತ್ನಾಕರ್ ವಿಭೂತೆ ಮಣಿಪುರದ ವಿಕ್ರಂ ಜೀತ್ ಸಿಂಗ್ ವಿರುದ್ಧ, ಕರ್ನಾಟಕದ ಧನುಷ್ ರಾಮ್ ಕೇರಳದ ರಜತ್ ರಂಜಿತ್ ವಿರುದ್ಧ ಗೆದ್ದರು. ಲಕ್ಷಿತ್ ಸಾಲಿಯಾನ್ ಮತ್ತು ಧನುಷ್ ರಾಮ್ ಕ್ರಮವಾಗಿ 10 ಹಾಗೂ 14ನೇ ಸ್ಥಾನ ಗಳಿಸಿದರು. ಇವರಿಬ್ಬರು ಸೇರಿದಂತೆ 9 ಆಟಗಾರರು 7.5 ಪಾಯಿಂಟ್ ಗಳಿಸಿದರು.
ರಾತ್ರಿ ಕೊನೆಗೊಂಡ ಬ್ಲಿಟ್ಜ್ ಟೂರ್ನಿಯಲ್ಲಿ ಸೆಂಥಿಲ್ ಮಾರನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಂಥಿಲ್ ಮತ್ತು ಲಕ್ಷ್ಮಣ್ ಆರ್.ಆರ್ ತಲಾ 11.5 ಪಾಯಿಂಟ್ ಗಳಿಸಿದ್ದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಸೆಂಥಿಲ್ ಚಾಂಪಿಯನ್ ಆದರು. ನಿತೀಶ್ ಬೇಳೂರ್‌ಕರ್ ಮತ್ತು ಸಿದ್ಧಾರ್ಥ್ ಮೋಹನ್ ತಲಾ 11 ಪಾಯಿಂಟ್ ಗಳಿಸಿದ್ದರು. ನಿತೀಶ್ ಮೂರನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.