ಕೋನೇರು ಹಂಪಿ
ಬಟುಮಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರು ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಯುಕ್ಸಿನ್ ಸಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ. ಹಲವು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅನುಭವಿ ಹಂಪಿ ಅವರು ಇಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಭಾರತದ ಅಗ್ರಮಾನ್ಯ ಆಟಗಾರ್ತಿ ಹಂಪಿ ಅವರೊಂದಿಗೆ ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ. ಹಾರಿಕಾ, ಆರ್. ವೈಶಾಲಿ ಮತ್ತು ಇಂಟರ್‌ನ್ಯಾಷನಲ್ ಮಾಸ್ಟರ್ ದಿವ್ಯಾ ದೇಶಮುಖ್ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ ಒಂದೇ ದೇಶದ ನಾಲ್ವರು ಆಟಗಾರ್ತಿಯರು ಕ್ವಾರ್ಟರ್ ಫೈನಲ್ ತಲುಪಿದ್ದು ಇದೇ ಮೊದಲು.
ಭಾರತದ ಎರಡನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್, ಅನುಭವಿ ಹಾರಿಕಾ ಅವರು ಸ್ವದೇಶದ ಯುವ ತಾರೆ ದಿವ್ಯಾ ಅವರನ್ನು ಎದುರಿಸಲಿದ್ದಾರೆ. ಹೀಗಾಗಿ, ಭಾರತದ ಒಬ್ಬರು ಸೆಮಿಫೈನಲ್ ಪ್ರವೇಶಿಸುವುದು ಖಚಿತವಾಗಿದೆ.
ವೈಶಾಲಿ ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗಿದೆ. ಚೆನ್ನೈನ ಆಟಗಾರ್ತಿಯು ಮಹಿಳಾ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೊಂಗ್ಯಿ (ಚೀನಾ) ಅವರೊಂದಿಗೆ ಸೆಣಸಲಿದ್ದಾರೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಉಳಿದ ನಾಲ್ವರಲ್ಲಿ ಚೀನಾದ ಮೂವರು, ಮತ್ತೊಬ್ಬರು ಜಾರ್ಜಿಯಾದ ಆಟಗಾರ್ತಿಯಾಗಿದ್ದಾರೆ. ಭಾರತದ ಮೂವರು ಆಟಗಾರ್ತಿಯರಿಗೆ ಇಲ್ಲಿ ನಾಲ್ಕರ ಘಟ್ಟ ಪ್ರವೇಶಿಸಲು ಅವಕಾಶವಿದೆ.
ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಗಳಿಸುವರು. ಟೂರ್ನಿಯು ಒಟ್ಟು ₹6 ಕೋಟಿ ಬಹುಮಾನ ಮೊತ್ತ ಹೊಂದಿದ್ದು, ಪ್ರಶಸ್ತಿ ಗೆಲ್ಲುವ ಆಟಗಾರ್ತಿ ₹43 ಲಕ್ಷ ತಮ್ಮದಾಗಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.