ADVERTISEMENT

ಮಹಿಳಾ ವಿಶ್ವಕಪ್‌ ಹೊರಬೀಳುವ ಅಪಾಯದಲ್ಲಿ ನಾರ್ವೆ

ರಾಯಿಟರ್ಸ್
Published 25 ಜುಲೈ 2023, 18:55 IST
Last Updated 25 ಜುಲೈ 2023, 18:55 IST
ನ್ಯೂಜಿಲೆಂಡ್‌ ವಿರುದ್ಧ ಗೋಲು ಗಳಿಸಿದ ಫಿಲಿಪ್ಪೀನ್ಸ್‌ನ ಬೋಲ್ಡನ್‌ ಸಂಭ್ರಮಿಸಿದರು.
ನ್ಯೂಜಿಲೆಂಡ್‌ ವಿರುದ್ಧ ಗೋಲು ಗಳಿಸಿದ ಫಿಲಿಪ್ಪೀನ್ಸ್‌ನ ಬೋಲ್ಡನ್‌ ಸಂಭ್ರಮಿಸಿದರು.   ಎಎಫ್‌ಪಿ ಚಿತ್ರ

ಹ್ಯಾಮಿಲ್ಟನ್‌: ಸ್ವಿಜರ್ಲೆಂಡ್‌ ಸಂಗಡ ಗೋಲಿಲ್ಲದೇ ‘ಡ್ರಾ’ ಮಾಡಿಕೊಂಡ ನಾರ್ವೆ, ಈಗ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಿಂದ ಹೊರಬೀಳುವ ಅಪಾಯದಲ್ಲಿದೆ. ವಿಶ್ವದ ಕೆಲವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ, ಆಟ ಕಾಣುತ್ತಿರುವ ವೇಗದ ಜೊತೆಗೆ ಹೆಜ್ಜೆಹಾಕಲು ಒಂದು ಕಾಲದ ಸೂಪರ್‌ ಪವರ್‌ ತಂಡ ನಾರ್ವೆ ತಂಡ ವಿಫಲವಾಗುತ್ತಿದೆ.

ಅದಾ ಹೆಜೆರ್‌ಬರ್ಗ್, ಕರೋಲಿನ್‌ ಗ್ರಹಾಂ ಹಾನ್ಸೆನ್‌ ಮತ್ತು ಗುರೊ ರೀಟೆನ್‌ ಎಲ್ಲರೂ ಫಿಟ್‌ ಆಗಿ ತಂಡಕ್ಕೆ ಲಭ್ಯರಿದ್ದು ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. 1995ರ ಚಾಂಪಿಯನ್‌ ತಂಡ ಮೊದಲ ಪಂದ್ಯದಲ್ಲೇ ಜಂಟಿ ಆತಿಥೇಯ ನ್ಯೂಜಿಲೆಂಡ್‌ ತಂಡಕ್ಕೆ 0–1 ಗೋಲುಗಳಿಂದ ತಲೆಬಾಗಿತು. ಈಗ ಸ್ವಿಸ್‌ ತಂಡದ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡ ಪರಿಣಾಮ, ನಾರ್ವೆ ಭವಿಷ್ಯ ಇತರ ತಂಡಗಳ ಪ್ರದರ್ಶನ ಅವಲಂಬಿಸಿದೆ.

ಗುಂಪಿನಲ್ಲಿ ತನ್ನ ಅಂತಿಮ ಪಂದ್ಯವನ್ನು ನಾರ್ವೆ ಜುಲೈ 30ರಂದು ಫಿಲಿಪ್ಪೀನ್ಸ್ ವಿರುದ್ಧ ಆಡಲಿದೆ. ಅದೇ ದಿನ ಸ್ವಿಟ್ಜರ್ಲೆಂಡ್‌ (4 ಪಾಯಿಂಟ್‌), ನ್ಯೂಜಿಲೆಂಡ್‌ (3 ಪಾಯಿಂಟ್‌) ತಂಡದ ಎದುರು ಆಡಲಿದೆ.

ADVERTISEMENT

ಫಿಲಿಪ್ಪೀನ್ಸ್‌ಗೆ ಮಣಿದ ಕಿವೀಸ್‌: ವೆಲಿಂಗ್ಟನ್‌ನಲ್ಲಿ ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ ತಂಡ 1–0 ಗೋಲಿನಿಂದ ಜಂಟಿ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಅಚ್ಚರಿಯ ರೀತಿ ಸೋಲಿಸಿತು.

ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಫಿಲಿಪ್ಪೀನ್ಸ್‌ ಮೊದಲ ಪಂದ್ಯದಲ್ಲಿ ಸ್ವಿಜರ್ಲೆಂಡ್‌ ಎದುರು ಸೋಲನುಭವಿಸಿತ್ತು. ಕ್ರಮಾಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌ಗಿಂತ 20 ಸ್ಥಾನ ಮೇಲಿದೆ. 24ನೇ ನಿಮಿಷ ಸರಿನಾ ಬೋಲ್ಡನ್‌ ಅವರು ಹೆಡ್‌ ಮಾಡಿ ಗಳಿಸಿದ ಗೋಲು ನ್ಯೂಜಿಲೆಂಡ್‌ ತಂಡದ ಪಾಲಿಗೆ ಮುಳುವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.