ADVERTISEMENT

ಪ್ರೊ ಲೀಗ್ ಹಾಕಿ: ಭಾರತ ತಂಡಕ್ಕೆ ಪುಟಿದೇಳುವ ತವಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 19:30 IST
Last Updated 20 ಫೆಬ್ರುವರಿ 2026, 19:30 IST
ಎಫ್‌ಐಎಚ್‌ ಪ್ರೊ ಲೀಗ್ ಲೋಗೊ
ಎಫ್‌ಐಎಚ್‌ ಪ್ರೊ ಲೀಗ್ ಲೋಗೊ   

ಹೋಬಾರ್ಟ್‌: ತವರಿನಲ್ಲಿ ನಡೆದ ಎಫ್‌ಐಎಚ್‌ ಪ್ರೊ ಲೀಗ್‌ ಋತುವಿನ ಮೊದಲ ಲೆಗ್‌ನಲ್ಲಿ ಭಾರತ ಹಾಕಿ ತಂಡ ದಯನೀಯ ವೈಫಲ್ಯ ಅನುಭವಿಸಿದೆ. ಇದೀಗ, ಶನಿವಾರ ಆರಂಭವಾಗಲಿರುವ ಹೋಬಾರ್ಟ್‌ ಲೆಗ್‌ನಲ್ಲಿ ಹೊಸ ನಾಯಕ ಹಾರ್ದಿಕ್ ಸಿಂಗ್ ನೇತೃತ್ವದ ತಂಡವು ಪುಟಿದೇಳುವ ತವಕದಲ್ಲಿದೆ.

ಭಾರತ ತಂಡವು ಶನಿವಾರ ತಾಸ್ಮೇನಿಯಾ ಹಾಕಿ ಸೆಂಟರ್‌ನಲ್ಲಿ ನಡೆಯುವ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ಹೋಬಾರ್ಟ್‌ ಲೆಗ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವೂ ಕಣದಲ್ಲಿದೆ.

ರೂರ್ಕೆಲಾ ಲೆಗ್‌ ಭಾರತದ ಪಾಲಿಗೆ ದುಃಸ್ವಪ್ನವಾಯಿತು. ಅರ್ಜೆಂಟೀನಾ ಮತ್ತು ಬೆಲ್ಜಿಯಂ ವಿರುದ್ಧ ಆಡಿದ ತಲಾ ಎರಡು ಪಂದ್ಯಗಳಲ್ಲೂ ತಂಡ ಸೋಲನುಭವಿಸಿತು. ಈ ಲೆಗ್‌ ನಂತರ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ವೈಯಕ್ತಿಕ ಕಾರಣ ನೀಡಿ ವಿರಾಮ ಪಡೆದಿದ್ದಾರೆ. ಸಿಂಗ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಮುಂಬರುವ ಎಫ್‌ಐಎಚ್‌ ವಿಶ್ವಕಪ್, ಬಳಿಕ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ತಂಡದ ಸಂಯೋಜನೆ ರೂಪಿಸಲು, ಪರೀಕ್ಷಿಸಲು, ಲೋಪಗಳನ್ನು ತಿದ್ದಿಕೊಳ್ಳಲು ಈ ಪ್ರೊ ಲೀಗ್ ಭಾರತಕ್ಕೆ ಸದವಕಾಶ ಒದಗಿಸಿದೆ.

ಭಾರತ ಶನಿವಾರ ಸ್ಪೇನ್ ವಿರುದ್ಧ ಪಂದ್ಯ ಆಡಲಿರುವ ಭಾರತ ತಂಡವು, ಭಾನುವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.  ಫೆ. 24ರಂದು ಮರು ಪಂದ್ಯದಲ್ಲಿ ಸ್ಪೇನ್ ತಂಡವನ್ನು, 25ರಂದು ಮರು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು  ಮುಖಾಮುಖಿಯಾಗಲಿದೆ.

ಸ್ಪೇನ್ – ಭಾರತ ತಂಡಗಳು ಈ ಹಿಂದಿನ ಹತ್ತು ಮುಖಾಮುಖಿಗಳಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿವೆ. ಎರಡು ಪಂದ್ಯಗಳು ಡ್ರಾ ಆಗಿದ್ದು, ಎರಡೂ ಬಾರಿ ಭಾರತ ಶೂಟೌಟ್‌ನಲ್ಲಿ ಜಯಗಳಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳಲ್ಲಿ ಸಾಕಷ್ಟು ಗೋಲುಗಳು ದಾಖಲಾಗಿದ್ದರೂ ಭಾರತದ ಸಾಧನೆ ಅಷ್ಟೇನೂ ಉತ್ತಮವಾಗಿಲ್ಲ. ಕೊನೆಯ 10 ಪಂದ್ಯಗಳಲ್ಲಿ ಕಾಂಗರೂ ಪಡೆ ಆರು ಪಂದ್ಯಗಳನ್ನು ಗೆದ್ದರೆ, ಭಾರತ ಎರಡರಲ್ಲಷ್ಟೇ ಜಯಗಳಿಸಿದೆ. ಎರಡು ಡ್ರಾ ಆಗಿವೆ.

ಹಾರ್ದಿಕ್ ಸಿಂಗ್ ಅವರು ಅನುಭವಿಗಳು ಮತ್ತು ಹೊಸಬರ ಮಿಶ್ರಣವಿರುವ ತಂಡವನ್ನು ಮುನ್ನಡೆಸಬೇಕಾಗಿದೆ. ಅಮನ್‌ದೀಪ್ ಲಾಕ್ರಾ ಮತ್ತು ಮನ್‌ಮೀತ್ ಸಿಂಗ್ ಇತ್ತೀಚಿನ ರೂರ್ಕೆಲಾ ಲೆಗ್ ವೇಳೆ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

‘ಪ್ರತಿಷ್ಠಿತ ಪ್ರೊ ಲೀಗ್‌ನಂಥ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ. ಪಂದ್ಯದಲ್ಲಿ ಹರ್ಮನ್‌ಪ್ರೀತ್ ಗೈರು  ಕಾಡಲಿರುವುದು ನಿಜ, ಆದರೆ ಅವರ ಗೈರಿನಲ್ಲಿ ಉತ್ತಮ ಪ್ರದರ್ಶನ ನೀಡಿ ಛಾಪು ಮೂಡಿಸುವ ಅಮೂಲ್ಯ ಅವಕಾಶ ತಂಡದ ಉಳಿದ ಆಟಗಾರರಿಗೆ ಒದಗಲಿದೆ’ ಎಂದು ಹಾರ್ದಿಕ್ ಹೇಳಿದ್ದಾರೆ.

‘ನಾವು ಇತ್ತೀಚಿನ ಪಂದ್ಯಗಳ ಅವಲೋಕನ ನಡೆಸಿದ್ದೇವೆ. ಪಾಠಗಳನ್ನು ಕಲಿತಿದ್ದೇವೆ. ನಾವು ಹೋಬಾರ್ಟ್‌ ಲೆಗ್‌ಗೆ ಪ್ರವೇಶ ಮಾಡಿದ್ದು, ಸಕಾರಾತ್ಮಕ ಮತ್ತು ಆಕ್ರಮಣಕಾರಿ ಮನೋಭಾವದೊಡನೆ ಆಡಲಿದ್ದೇವೆ’ ಎಂದು ಅನುಭವಿ ಮಿಡ್‌ಫೀಲ್ಡರ್‌ ಹೇಳಿದರು.

ಯುವ ಆಟಗಾರರಾದ ಅಂಗದ ವೀರ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್, ಆದಿತ್ಯ ಲಾಲಗೆ ಸಹ ಮುಂಚೂಣಿ ಪಡೆಯಲ್ಲಿ ಕೌಶಲ ತೋರಬೇಕಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 12 ಗಂಟೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.