
ನವದೆಹಲಿ: ಮುಂದಿನ ತಿಂಗಳು ರೂರ್ಕೆಲಾದಲ್ಲಿ ಆರಂಭವಾಗಲಿರುವ ಪುರುಷರ ಎಫ್‌ಐಎಚ್ ಪ್ರೊ ಲೀಗ್ ಆವೃತ್ತಿಗೆ 33 ಸಂಭಾವ್ಯ ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಗುರುವಾರ ಪ್ರಕಟಿಸಿದೆ. ಈ ತಂಡದಲ್ಲಿ ಅನುಭವಿ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಸ್ಥಾನ ಪಡೆದಿಲ್ಲ.
ಎರಡು ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತ ತಂಡದ ಭಾಗವಾಗಿದ್ದ 33 ವರ್ಷದ ಮನ್‌ಪ್ರೀತ್ ಅವರು 15 ವರ್ಷಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಬಿರದ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಮನ್‌ಪ್ರೀತ್ (411) ಅವರು ಭಾರತದ ಪರ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಎರಡನೇ ಆಟಗಾರನಾಗಿದ್ದಾರೆ. ಹಾಕಿ ಇಂಡಿಯಾ ಹಾಲಿ ಅಧ್ಯಕ್ಷ ದಿಲೀಪ್ ಟರ್ಕಿ (412) ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ.
ಫೆ.10ರಿಂದ 15ರವರೆಗೆ ರೂರ್ಕೆಲಾದಲ್ಲಿ ನಿಗದಿಯಾಗಿರುವ ಪಂದ್ಯಗಳಿಗೂ ಮುನ್ನ ಫೆ.1ರಿಂದ 7ರವರೆಗೆ ಶಿಬಿರ ನಡೆಯಲಿದೆ. ಅನುಭವಿ ಗೋಲ್‌ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ. ಕಳೆದ ವರ್ಷ ಜೂನಿಯರ್ ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಿನ್ಸ್‌ದೀಪ್ ಸಿಂಗ್ ಅವರಿಗೆ ಅದೃಷ್ಟ ಖುಲಾಯಿಸಿದೆ.
ಒಂಬತ್ತು ತಂಡಗಳಲ್ಲಿದ್ದ ಟೂರ್ನಿಯಲ್ಲಿ ಭಾರತ ತಂಡವು ಕಳೆದ ವರ್ಷ ಎಂಟನೇ ಸ್ಥಾನ ಗಳಿಸಿತ್ತು. ಈ ಬಾರಿ ಫೆ.11ರಂದು ಪ್ರಬಲ ಬೆಲ್ಜಿಯಂ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. 13ರಂದು ಅರ್ಜೆಂಟೀನಾ ವಿರುದ್ಧ ಪಂದ್ಯ ಆಡಲಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ತಂಡವು ಫೆ.14ರಂದು ಬೆಲ್ಜಿಯಂ ವಿರುದ್ಧ ಮತ್ತು 15ರಂದು ಅರ್ಜೆಂಟೀನಾ ವಿರುದ್ಧ ರಿವರ್ಸ್ ಪಂದ್ಯಗಳನ್ನು ಆಡಲಿದೆ.
ಭಾರತ ತಂಡ ನಂತರ ಹೋಬರ್ಟ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಸ್ಪೇನ್ (ಫೆ.21 ಮತ್ತು 24) ಮತ್ತು ಆಸ್ಟ್ರೇಲಿಯಾ (ಫೆ.22 ಮತ್ತು 25) ತಂಡಗಳನ್ನು ಎದುರಿಸಲಿದೆ. ಜೂನ್‌ನಲ್ಲಿ ಯುರೋಪ್ ಲೆಗ್‌ನ ಪಂದ್ಯಗಳ ನಡೆಯಲಿವೆ.
ಸಂಭಾವ್ಯ ಆಟಗಾರರು: ಗೋಲ್‌ಕೀಪರ್‌ಗಳು: ಪವನ್, ಸೂರಜ್ ಕರ್ಕೇರ, ಮೋಹಿತ್ ಶಶಿಕುಮಾರ್, ಪ್ರಿನ್ಸ್‌ದೀಪ್ ಸಿಂಗ್.
ಡಿಫೆಂಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಜುಗರಾಜ್ ಸಿಂಗ್, ಸುಮಿತ್, ಪೂವಣ್ಣ ಚಂದೂರಾ ಬಾಬಿ, ಯಶದೀಪ್ ಸಿವಾಚ್, ನೀಲಂ ಸಂಜೀಪ್ ಸೆಸ್, ಅಮನದೀಪ್ ಲಾಕ್ರಾ.
ಮಿಡ್‌ಫೀಲ್ಡರ್‌ಗಳು: ರಾಜಿಂದರ್ ಸಿಂಗ್, ಮನ್‌ಮೀತ್ ಸಿಂಗ್, ಹಾರ್ದಿಕ್ ಸಿಂಗ್, ರವಿಚಂದ್ರ ಸಿಂಗ್ ಮೋಯಿರಾಂಗ್ತೇಮ್, ವಿವೇಕ್ ಸಾಗರ್ ಪ್ರಸಾದ್, ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ನೀಲಕಂಠ ಶರ್ಮಾ, ರೋಸನ್ ಕುಜೂರ್.
ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಶಿಲಾನಂದ ಲಾಕ್ರಾ, ಮನದೀಪ್ ಸಿಂಗ್, ಅರೈಜೀತ್ ಸಿಂಗ್ ಹುಂಡಲ್, ಅಂಗದ್ ಬೀರ್ ಸಿಂಗ್, ಉತ್ತಮ್ ಸಿಂಗ್, ಸೆಲ್ವಂ ಕಾರ್ತಿ, ಆದಿತ್ಯ ಅರ್ಜುನ್ ಲಾಲಾಗೆ, ಮಣಿಂದರ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.