ADVERTISEMENT

Australian Open Badminton: ಎರಡನೇ ಸುತ್ತಿಗೆ ಭಾರತದ ಐವರು

ಪಿಟಿಐ
Published 19 ನವೆಂಬರ್ 2025, 14:29 IST
Last Updated 19 ನವೆಂಬರ್ 2025, 14:29 IST
<div class="paragraphs"><p>&nbsp;ಲಕ್ಷ್ಯ ಸೇನ್‌</p></div>

 ಲಕ್ಷ್ಯ ಸೇನ್‌

   

ಸಿಡ್ನಿ: ಅನುಭವಿಗಳಾದ ಲಕ್ಷ್ಯ ಸೇನ್‌, ಎಚ್‌.ಎಸ್‌. ಪ್ರಣಯ್ ಸೇರಿದಂತೆ ಭಾರತದ ಐದು ಮಂದಿ ಆಟಗಾರರು, ಆಸ್ಟ್ರೇಲಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿಗೆ ಮುನ್ನಡೆದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಮೊದಲ ಸುತ್ತಿನಲ್ಲಿ 21–17, 21–13 ರಿಂದ ತೈವಾನ್‌ ಸು ಲಿ ಯಾಂಗ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು. ಅವರು ಎರಡನೇ ಸುತ್ತಿನಲ್ಲಿ ತೈವಾನ್‌ನ ಮತ್ತೊಬ್ಬ ಆಟಗಾರ ಚಿ ಯು ಜೆನ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

2023ರಲ್ಲಿ ಈ ಟೂರ್ನಿಯ ರನ್ನರ್ ಅಪ್ ಆಗಿದ್ದ ಪ್ರಣಯ್‌ ಆರಂಭದಲ್ಲಿ ಪರದಾಡಿದರೂ ಚೇತರಿಸಿಕೊಂಡು ವಿಶ್ವ ಕ್ರಮಾಂಕದಲ್ಲಿ 85ನೇ ಸ್ಥಾನದಲ್ಲಿರುವ ಯೊಹಾನೆಸ್‌ ಸವುತ್‌ ಮಾರ್ಸೆಲಿನೊ ಅವರನ್ನು 6–21, 21–12, 21–17 ರಿಂದ ಸೋಲಿಸಿದರು. ಈ ಪಂದ್ಯ 57 ನಿಮಿಷಗಳವರೆಗೆ ಸಾಗಿತು.

33 ವರ್ಷ ವಯಸ್ಸಿನ ಪ್ರಣಯ್ ಎರಡನೇ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಅಲ್ವಿ ಫರ್ಹಾನ್ (ಇಂಡೊನೇಷ್ಯಾ) ಅವರ ವಿರುದ್ಧ ಆಡಲಿದ್ದಾರೆ.

ಈ ವರ್ಷದ ಆರಂಭದಲ್ಲಿ ಅಮೆರಿಕದ ಓಪನ್‌ನಲ್ಲಿ ತಮ್ಮ ಮೊದಲ ಸೂಪರ್ 300 ಟೂರ್ನಿ ಜಯಿಸಿದ್ದ ಆಯುಷ್‌ ಶೆಟ್ಟಿ 21–11, 21–15 ರಿಂದ ಕೆನಡಾದ ಸ್ಯಾಮ್ ಯುವಾನ್ ಅವರನ್ನು ಕೇವಲ 33 ನಿಮಿಷಗಳಲ್ಲಿ ಸೋಲಿಸಿದರು. ಕರ್ನಾಟಕದ 20 ವರ್ಷ ವಯಸ್ಸಿನ ಆಟಗಾರ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನ್ ಆಟಗಾರ ಕೊಡೈ ನರವೋಕಾ ಅವರನ್ನು ಎದುರಿಸಲಿದ್ದಾರೆ.

ತರುಣ್ ಮನ್ನೇಪಲ್ಲಿ ಅವರು ದೀರ್ಘ ಹೋರಾಟ ಕಂಡ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್‌ ಯೊಹಾನ್ಸೆನ್ ಅವರನ್ನು 21–13, 17–21, 21–19 ರಿಂದ ಪ್ರಯಾಸದಿಂದ ಸೋಲಿಸಿದರು. ಅವರು ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಲಿನ್ ಚುನ್‌–ಯಿ (ತೈವಾನ್‌) ವಿರುದ್ಧ ಆಡಲಿದ್ದಾರೆ.

2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅನುಭವಿ ಕಿದಂಬಿ ಶ್ರೀಕಾಂತ್‌ ಕೂಡ ಎರಡನೇ ಸುತ್ತಿಗೆ ಮುನ್ನಡೆದರು. ಅವರು ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ತೈವಾನ್‌ನ ಲೀ ಚಿಯಾ ಹಾವೊ ಅವರನ್ನು 64 ನಿಮಿಷಗಳ ಹಣಾಹಣಿಯಲ್ಲಿ 21–19, 19–21, 21–16 ರಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ ಅವರು ಜಪಾನ್‌ನ ಶೋಗೊ ಒಗಾವಾ ಅವರನ್ನು ಎದುರಿಸಲಿದ್ದಾರೆ.

ಆದರೆ ಕಿರಣ್ ಜಾರ್ಜ್ ಹೋರಾಡಿ ಸೋತರು. ಆರನೇ ಶ್ರೇಯಾಂಕದ ಕೆಂಟಾ ನಿಶಿಮೋಟೊ ಅವರು 11–21, 24–22, 21–17 ರಿಂದ ಕಿರಣ್ ವಿರುದ್ಧ ಜಯಗಳಿಸಿದರು. ಜಪಾನ್‌ನ ಆಟಗಾರ ಕಳೆದ ವಾರ ಜಪಾನ್‌ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ಏರುವ ಹಾದಿಯಲ್ಲಿ ಲಕ್ಷ್ಯ ಅವರನ್ನು ಮಣಿಸಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಮೋಹಿತ್ ಜಗ್ಲಾನ್– ಲಕ್ಷಿತಾ ಜಗ್ಲಾನ್ ಜೋಡಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿತು. ಕೆನಡಾದ ನಿಲ್ ಯಕುರಾ– ಕ್ರಿಸ್ಟಲ್‌ ಲೈ ಜೋಡಿ 21–12, 21–16 ರಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.