ADVERTISEMENT

ಅಕ್ರಮಕ್ಕೆ ಬೆಂಬಲ ನೀಡಿದ ಲೆಮೈನ್ ಡಿಯಾಕ್‌ಗೆ 2 ವರ್ಷ ಜೈಲು

ಏಜೆನ್ಸೀಸ್
Published 16 ಸೆಪ್ಟೆಂಬರ್ 2020, 16:12 IST
Last Updated 16 ಸೆಪ್ಟೆಂಬರ್ 2020, 16:12 IST
ನ್ಯಾಯಾಲಯಕ್ಕೆ ಹಾಜರಾದ ಲೆಮೈನ್ ಡಿಯಾಕ್‌ –ರಾಯಿಟರ್ಸ್ ಚಿತ್ರ
ನ್ಯಾಯಾಲಯಕ್ಕೆ ಹಾಜರಾದ ಲೆಮೈನ್ ಡಿಯಾಕ್‌ –ರಾಯಿಟರ್ಸ್ ಚಿತ್ರ   

ಪ್ಯಾರಿಸ್: ಉದ್ದೀಪನ ಮದ್ದು ಸೇವನೆಗೆ ಬೆಂಬಲ ಸೇರಿದಂತೆ ಕ್ರೀಡಾ ಕ್ಷೇತ್ರದ ಬಹುಕೋಟಿ ಅಕ್ರಮದಲ್ಲಿ ಭಾಗಿಯಾದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಮಾಜಿ ಅಧ್ಯಕ್ಷ ಲೆಮೈನ್ ಡಿಯಾಕ್‌ಗೆ ಪ್ಯಾರಿಸ್‌ ಕೋರ್ಟ್‌ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

1999ರಿಂದ 2015ರ ವರೆಗೆ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಡಿಯಾಕ್‌ಗೆ ಈಗ 87 ವರ್ಷ. ಉದ್ದೀಪನ ಮದ್ದು ಸೇವಿಸಿದ್ದ ರಷ್ಯಾದ ಕ್ರೀಡಾಪಟುಗಳಿಗೆ ಅಥ್ಲೆಟಿಕ್ ಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರು ಆರೋಪಿ ಎಂದು ಸಾಬೀತಾಗಿದೆ. ಆದರೆ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿತು. ಒಟ್ಟಾರೆ ₹ ನಾಲ್ಕು ಕೋಟಿ 36 ಲಕ್ಷ ಮೊತ್ತದ ದಂಡ ವಿಧಿಸಿತು.

ಡಿಯಾಕ್ ಅವರ ಪುತ್ರ ಪಾಪಾ ಮಸಾಟ ಡಿಯಾಕ್ ಅವರನ್ನೂ ಅಪರಾಧಿ ಎಂದು ಘೋಷಿಸಲಾಗಿದೆ. ಅವರು ಫೆಡರೇಷನ್‌ನ ಮಾರುಕಟ್ಟೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅವರು ಈಗ ಸೆನೆಗಲ್‌ನಲ್ಲಿ ವಾಸವಾಗಿರುವುದರಿಂದ ಬಂಧನಕ್ಕೆ ತೊಡಕಾಗಿದೆ.

ADVERTISEMENT

2012ರ ಒಲಿಂಪಿಕ್ಸ್‌ಗೂ ಮುನ್ನ ನಡೆದ ಭ್ರಷ್ಟಾಚಾರದಲ್ಲಿ ಡಿಯಾಕ್ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ್ದನ್ನು ಮುಚ್ಚಿಹಾಕಲು ಕೋಟ್ಯಂತರ ಮೊತ್ತ ಪಡೆದಿರುವುದು ಸಾಬೀತಾಗಿದೆ.

ಐಎಎಎಫ್‌ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಡಿಯಾಕ್ ಅವರು ಒಲಿಂಪಿಕ್ಸ್‌ಗೆ ಸಂಬಂಧಿಸಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಆದರೆ ವಿವಾದಗಳ ಹಿನ್ನೆಲೆಯಲ್ಲಿ ಅವರು 2015ರಲ್ಲಿ ಪದತ್ಯಾಗ ಮಾಡಬೇಕಾಯಿತು. ಇದು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ಗೆ ಕಪ್ಪು ಚುಕ್ಕೆಯಾಗಿತ್ತು. ನಂತರ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು. ಆರೋಪಿ ಅಥ್ಲೀಟ್‌ಗಳ ರಕ್ಷಣೆಗಾಗಿ ಅವರು ಹಣ ಪಡೆದುಕೊಂಡಿರುವ ವಿಷಯವನ್ನು ನಂತರ ತನಿಖಾಧಿಕಾರಿಗಳು ಬಯಲು ಮಾಡಿದ್ದರು.

₹ 29 ಕೋಟಿ 45 ಲಕ್ಷ ಮೊತ್ತದ ವ್ಯವಹಾರ: ಸುಮಾರು ₹ 29 ಕೋಟಿ 45 ಲಕ್ಷ ಮೊತ್ತವನ್ನು ಅವರು ಅಥ್ಲೀಟ್‌ಗಳಿಂದ ಪಡೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸೆನೆಗಲ್‌ನ ರಾಜಕೀಯದಲ್ಲಿ ಬಳಸುವುದಕ್ಕಾಗಿ ರಷ್ಯಾದಿಂದ ₹ 11 ಕೋಟಿ ಮೊತ್ತ ಪಡೆದುಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ. 2012ರಲ್ಲಿ ನಡೆದಿದ್ದ ಅಧ್ಯಕ್ಷೀಯ ಮತ್ತು ಶಾಸನ ಸಭೆಯ ಚುನಾವಣೆಯಲ್ಲಿ ಈ ಹಣವನ್ನು ತೊಡಗಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ರಷ್ಯಾದ ಬ್ಯಾಂಕ್‌, ಚೀನಾದ ತೈಲ ಉದ್ಯಮ, ದಕ್ಷಿಣ ಕೊರಿಯಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಗನಿಗಾಗಿ ಅವರು ಹಣ ಹೂಡಿದ್ದರು ಎನ್ನಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.