ADVERTISEMENT

ಸ್ಪೇನ್‌–ಫ್ರಾನ್ಸ್‌ ಸಮಬಲದ ಕಾದಾಟ

ಮೊದಲ ಗೋಲು ಗಳಿಸಿದ ತಿಮೋತಿ ಕ್ಲೆಮೆಂಟ್‌; ಸಮಾಧಾನಕರ ಗೋಲು ಗಳಿಸಿದ ಅಲ್ವಾರೊ

ಪಿಟಿಐ
Published 3 ಡಿಸೆಂಬರ್ 2018, 16:06 IST
Last Updated 3 ಡಿಸೆಂಬರ್ 2018, 16:06 IST
ಫ್ರಾನ್ಸ್ ಪರ ಗೋಲು ಗಳಿಸಿದ ತಿಮೋತಿ ಕ್ಲೆಮೆಂಟ್‌ ಸಂಭ್ರಮಿಸಿದ ರೀತಿ –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ
ಫ್ರಾನ್ಸ್ ಪರ ಗೋಲು ಗಳಿಸಿದ ತಿಮೋತಿ ಕ್ಲೆಮೆಂಟ್‌ ಸಂಭ್ರಮಿಸಿದ ರೀತಿ –ಎಫ್‌ಐಎಚ್‌ ವೆಬ್‌ಸೈಟ್ ಚಿತ್ರ   

ಭುವನೇಶ್ವರ: ಆರಂಭದಲ್ಲೇ ಆಘಾತ ಅನುಭವಿಸಿದರೂ ಎದೆಗುಂದಿದ ಸ್ಪೇನ್ ತಂಡದವರು ವಿಶ್ವ ಕಪ್ ಹಾಕಿ ಟೂರ್ನಿಯ ಫ್ರಾನ್ಸ್ ಎದುರಿನ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಪಂದ್ಯ 1–1ರಿಂದ ಡ್ರಾ ಆಯಿತು. ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ತಂಡ ನ್ಯೂಜಿಲೆಂಡ್ ವಿರುದ್ಧ 1–2ರಿಂದ ಸೋತಿತ್ತು. ಸ್ಪೇನ್‌, ಅರ್ಜೆಂಟೀನಾಗೆ 3–4ರಿಂದ ಮಣಿದಿತ್ತು.

ಸೋಮವಾರದ ಪಂದ್ಯದ ಉದ್ದಕ್ಕೂ ಸ್ಪೇನ್ ಪ್ರಾಬಲ್ಯ ಮೆರೆಯಿತು. ಆದರೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಚೆಂಡನ್ನು ಗುರಿ ಸೇರಿಸಲು ಆಟಗಾರರಿಗೆ ಸಾಧ್ಯವಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಗಳಿಸಿದ ಗೋಲಿನ ಮೂಲಕ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಒಟ್ಟು 11 ಬಾರಿ ಎದುರಾಳಿಗಳ ಆವರಣಕ್ಕೆ ನುಗ್ಗಿದ ಸ್ಪೇನ್‌ಗೆ ಏಳು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದ್ದವು. ಫ್ರಾನ್ಸ್‌ಗೆ ಒಂದು ಪೆನಾಲ್ಟಿ ಕಾರ್ನರ್ ಮತ್ತು ಒಂದು ಪೆನಾಲ್ಟಿ ಸ್ಟ್ರೋಕ್ ಅವಕಾಶ ಲಭಿಸಿತ್ತು.

ಆರನೇ ನಿಮಿಷದಲ್ಲಿ ತಿಮೋತಿ ಕ್ಲೆಮೆಂಟ್ ಗಳಿಸಿದ ಫೀಲ್ಡ್ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಫ್ರಾನ್ಸ್‌ ನಂತರ ಭರವಸೆಯಿಂದಲೇ ಆಡಿತು. ಸಮಬಲ ಸಾಧಿಸಲು ಪ್ರಯತ್ನಿಸಿದ ಸ್ಪೇನ್‌ ಮೂರು ಕ್ವಾರ್ಟರ್‌ಗಳಲ್ಲಿ ನಿರಾಸೆಗೆ ಒಳಗಾಯಿತು. 48ನೇ ನಿಮಿಷದಲ್ಲಿ ಅಲ್ವಾರೊ ಇಗ್ಲೆಸಿಯಸ್‌ ಗಳಿಸಿದ ಗೋಲಿನ ಮೂಲಕ ತಂಡ ನಿಟ್ಟುಸಿರು ಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.