ADVERTISEMENT

ಚೆಸ್‌: ಸೆಮಿಗೆ ಅರ್ಜುನ್‌, ಪ್ರಜ್ಞಾನಂದಗೆ ಸೋಲು

ಪಿಟಿಐ
Published 18 ಜುಲೈ 2025, 11:37 IST
Last Updated 18 ಜುಲೈ 2025, 11:37 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಲಾಸ್‌ ವೇಗಸ್‌ : ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಅವರು ಉಜ್ಬೇಕಿಸ್ತಾನದ ನದಿರ್ಬೆಕ್‌ ಅಬ್ದುಸತ್ತಾರೋವ್‌ ಅವರನ್ನು ಗುರುವಾರ ಸೋಲಿಸಿ ಲಾಸ್‌ ವೇಗಸ್‌ ಫ್ರೀಸ್ಟೈಲ್‌ ಚೆಸ್ ಗ್ರ್ಯಾನ್‌ಸ್ಲಾಮ್‌ ಟೂರ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಆದರೆ ಭಾರತದ ಇನ್ನೊಬ್ಬ ಯುವತಾರೆ ಆರ್‌.ಪ್ರಜ್ಞಾನಂದ ಸವಾಲು ಅಂತ್ಯಗೊಂಡಿತು. 

ಎರಡು ರ‍್ಯಾಪಿಡ್‌ ಪಂದ್ಯಗಳನ್ನು ಒಳಗೊಂಡಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜುನ್‌ 1.5–0.5 ರಿಂದ ಅಬ್ದುಸತ್ತಾರೋವ್ ಅವರನ್ನು ಸೋಲಿಸಿದರು. ಅಮೆರಿಕದ ಫ್ಯಾಬಿಯಾನೊ ಕರುವಾನ ತೀವ್ರ ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ಪ್ರಜ್ಞಾನಂದ ಅವರನ್ನು 4–3 ರಿಂದ ಸೋಲಿಸಿದರು.

ಅರ್ಜುನ್‌– ಅಬ್ದುಸತ್ತಾರೋವ್ ನಡುವಣ ಮೊದಲ ಪಂದ್ಯ ಡ್ರಾ ಆಯಿತು. ಆದರೆ ಎರಡನೇ ಪಂದ್ಯದಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಭಾರತದ ಆಟಗಾರ ಆರಂಭದಿಂದಲೇ ಮೇಲುಗೈ ಸಾಧಿಸಿದ ಬೇಗನೇ ಎದುರಾಳಿಯ ರೂಕ್‌ ಮತ್ತು ಬಿಷಪ್‌ (‘ಆನೆ’ ಮತ್ತು ‘ರಥ’) ಪಡೆದರು. ಅವರ ಗೆಲುವು ಅಲ್ಲಿಂದಲೇ ಖಚಿತವಾಯಿತು.

ADVERTISEMENT

ಇತರ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಅರೋನಿಯನ್ 2.5–1.5 ರಿಂದ ಅಮೆರಿಕದ ಹಿಕಾರು ನಕಾಮುರ ಅವರನ್ನು, ಅಮೆರಿಕದ ಹ್ಯಾನ್ಸ್‌ ಮೋಕ್ ನೀಮನ್ 4–2 ರಿಂದ ಉಜ್ಬೇಕಿಸ್ತಾನದ ಜಾವೊಖಿರ್ ಸಿಂಧರೋವ್ ಅವರನ್ನು ಮಣಿಸಿದರು.

ಅರ್ಜುನ್‌ ಅವರು ಸೆಮಿಫೈನಲ್ ಪಂದ್ಯದಲ್ಲಿಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಲೆವೊನ್ ಅರೋನಿಯನ್ ಅವರನ್ನು ಎದುರಿಸಲಿದ್ದಾರೆ. ಅಮೆರಿಕದ ವ್ಯವಹಾರವಾದ ಇನ್ನೊಂದು ಸೆಮಿಫೈನಲ್‌ನಲ್ಲಿ ಹ್ಯಾನ್ಸ್‌ ನೀಮನ್ ಅವರು ಫ್ಯಾಬಿಯಾನೊ ಕರುವಾನ ಅವರಿಗೆ ಮುಖಾಮುಖಿಯಾಗುವರು.

ಟೂರ್ನಿಯು ₹6.5 ಕೋಟಿ ಬಹುಮಾನ ನಿಧಿ ಹೊಂದಿದೆ.

ಎರಡು ಗುಂಪುಗಳಿಂದ ತಲಾ ನಾಲ್ಕರಂತೆ ಅರ್ಹತೆ ಪಡೆದ ಮೊದಲ ಎಂಟು ಆಟಗಾರರು ಮೊದಲ ನಾಕೌಟ್‌  (ಅಪ್ಪರ್‌ ಬ್ರ್ಯಾಕೆಟ್) ಆಡುತ್ತಾರೆ. ಸ್ಥಾನ ಪಡೆಯದೇ ಇರುವ ಆಟಗಾರರ ನಡುವೆಯೂ ಇನ್ನೊಂದು ನಾಕೌಟ್‌ (ಲೋವರ್‌ ಬ್ರ್ಯಾಕೆಟ್‌) ನಡೆಯುತ್ತದೆ. ಎರಡೂ ನಾಕೌಟ್‌ಗಳ ಫೈನಲ್‌ ಜುಲೈ 19ರಂದು ನಡೆಯಲಿದೆ.

ಲೋವರ್‌ ಬ್ರ್ಯಾಕೆಟ್‌ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಗ್ರಮಾನ್ಯ ಆಟಗಾರ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ 2–0  ಯಿಂದ ಭಾರತದ ವಿದಿತ್ ಗುಜರಾತಿ ಅವರನ್ನು ಸೋಲಿಸಿದರೆ, ಅಮೆರಿಕದ ವೆಸ್ಲಿ ಸೊ 1.5–0.5 ರಿಂದ ಸ್ವದೇಶದ ಸಾಮ್ಯುಯೆಲ್‌ ಸೆವಿಯನ್ ಅವರನ್ನು, ಲೀನಿಯರ್‌ ಡೊಮಿಂಗೆಝ್‌ ಪೆರೆಝ್‌ 1.5–0.5 ರಿಂದ ಕಜಕಸ್ತಾನದ ಬಿಬಿಸಾರಾ ಅಸ್ಸುಬಯೇವಾ ಅವರನ್ನು ಮಣಿಸಿದರು. ಮೊದಲ ಲೆಗ್‌ನ ವಿಜೇತಮ ಜರ್ಮನಿಯ ವಿನ್ಸೆಂಟ್ ಕೀಮರ್‌ 2.5–1.5 ರಿಂದ ಅಮೆರಿಕದ ರಾಬ್ಸನ್‌ ರೇ ಅವರನ್ನು ಸೋಲಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.