ಪ್ಯಾರಿಸ್: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಏಷ್ಯಾ ವಲಯದಲ್ಲಿ ಈಚೆಗೆ ನಡೆದ ಬಹುತೇಕ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಈ ಜೋಡಿಯು ತಮ್ಮ ‘ನೆಚ್ಚಿನ ಸ್ಥಳ’ ಪ್ಯಾರಿಸ್‌ನಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿದೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 6ನೇ ಕ್ರಮಾಂಕದಲ್ಲಿರುವ ಸಾತ್ವಿಕ್ – ಚಿರಾಗ್ ಅವರು 2022 ಹಾಗೂ 2024ರಲ್ಲಿ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಪ್ಯಾರಿಸ್‌ನಲ್ಲಿಯೇ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು.
ಸಾತ್ವಿಕ್–ಚಿರಾಗ್ ಜೋಡಿಯು ಇಂಡೊನೇಷ್ಯಾದ ಮುಹಮ್ಮದ್ ರಿಯಾನ್ ಅರ್ಡಿಯಾಂಟೊ– ರಹಮತ್ ಹಿದಾಯತ್ ವಿರುದ್ಧ ಅಭಿಯಾನ ಆರಂಭಿಸಲಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ ಲಕ್ಷ್ಯ ಸೇನ್ ಹಾಗೂ ಉದಯೋನ್ಮುಖ ಆಟಗಾರ ಆಯುಷ್ ಶೆಟ್ಟಿ ಅವರು ಕಣದಲ್ಲಿದ್ದು, ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.
ಲಕ್ಷ್ಯ ಅವರು ಮೊದಲ ಸುತ್ತಿನಲ್ಲಿ ಐರ್ಲೆಂಡ್‌ನ ನ್ಹಾಟ್ ನುಯೆನ್ ವಿರುದ್ಧ ಹಾಗೂ ಕರ್ನಾಟಕದ ಆಯುಷ್ ಅವರು ಜಪಾನ್‌ನ ಕೋಕಿ ವತಾನಬೆ ಎದುರು ಅಭಿಯಾನ ಆರಂಭಿಸಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಉದಯೋನ್ಮುಖ ಆಟಗಾರ್ತಿಯರಾದ ಅನ್ಮೋಲ್ ಖಾರ್ಬ್ ಹಾಗೂ ಉನ್ನತಿ ಹೂಡ ಅವರೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.