ಚೀನಾ ಆಟಗಾರ್ತಿ ಝೆಂಗ್ ಕ್ವಿನ್ವೆನ್
ಪ್ಯಾರಿಸ್: ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಮತ್ತು ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ ಶುಕ್ರವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಯಾಸ ಗೆಲುವಿ ನೊಂದಿಗೆ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಹಿನ್ನೆಡೆಯಿಂದ ಚೇತರಿಸಿಕೊಂಡ ಎಂಟನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಬೆಲಾರಸ್‌ನ ತಾರೆ ಸಬಲೆಂಕಾ 6-2, 6-3ರಿಂದ ಸರ್ಬಿಯಾದ ಎಡಗೈ ಆಟಗಾರ್ತಿ ಓಲ್ಗಾ ಡೇನಿಲೋವಿಕ್ ಅವರನ್ನು ಹಿಮ್ಮೆಟ್ಟಿಸಿದರು. 34ನೇ ಕ್ರಮಾಂಕದ ಓಲ್ಗಾ ಅವರನ್ನು ಕೇವಲ 79 ನಿಮಿಷದಲ್ಲಿ ಸಬಲೆಂಕಾ ಸೋಲಿಸಿದರು.
ಮೂರು ಗ್ರ್ಯಾನ್‌ಸ್ಲಾಮ್ ಕಿರೀಟಗಳಿಗೆ ಒಡತಿಯಾಗಿರುವ ಸಬಲೆಂಕಾ ಇಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರಿಗೆ 16ನೇ ಶ್ರೇಯಾಂಕದ ಅಮಂಡಾ ಅನಿಸಿಮೊವಾ ಎದುರಾಳಿಯಾಗಿದ್ದಾರೆ.
ಎಂಟನೇ ಶ್ರೇಯಾಂಕದ ಝೆಂಗ್ 6-3, 6-4ರಿಂದ ಕೆನಡಾದ ವಿಕ್ಟೋರಿಯಾ ಎಂಬೊಕೊ ಅವರನ್ನು ಸೋಲಿಸಿದರು. ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿರುವ ಚೀನಾ ಆಟಗಾರ್ತಿ ಈ ಗೆಲುವಿನೊಂದಿಗೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಗೆಲುವಿನ ಓಟವನ್ನು ಒಂಬತ್ತು ಪಂದ್ಯಗಳಿಗೆ ವಿಸ್ತರಿಸಿಕೊಂಡರು.
ಶ್ವಾಂಟೆಕ್ ಗೆಲುವಿನ ಓಟ: ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್ ಮೂರನೇ ಸುತ್ತಿನಲ್ಲಿ 6-2, 7-5ರಿಂದ ರೊಮೇನಿಯಾದ ಜಾಕ್ವೆಲಿನ್ ಕ್ರಿಸ್ಟಿಯನ್ ಅವರನ್ನು ಸೋಲಿಸಿದರು.
ಫ್ರೆಂಚ್ ಓಪನ್‌ನಲ್ಲಿ ತನ್ನ ಗೆಲುವಿನ ಓಟವನ್ನು 24 ಪಂದ್ಯಗಳಿಗೆ ವಿಸ್ತರಿಸಿಕೊಂಡ ಪೋಲೆಂಡ್‌ನ ಶ್ವಾಂಟೆಕ್ ಇಲ್ಲಿ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ಬಾರಿ ಚಾಂಪಿಯನ್ ಆಗಿದ್ದಾರೆ. ಐದನೇ ಶ್ರೇಯಾಂಕದ ಅವರು ಇಲ್ಲಿ ಐದನೇ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ.
ಮುಸೆಟ್ಟಿಗೆ ಗೆಲುವು: ಇಟಲಿಯ ಮುಸೆಟ್ಟಿ 4-6, 6-4, 6-3, 6-2ರ ಸೆಟ್‌ಗಳಿಂದ ಅರ್ಜೆಂಟೀನಾದ ಮರಿಯಾನೊ ನವೋನ್ ಅವರ ಸವಾಲನ್ನು ಮೆಟ್ಟಿನಿಂತರು. ಮೊದಲ ಸೆಟ್‌ನಲ್ಲಿ ಶ್ರೇಯಾಂಕರಹಿತ ಮರಿಯಾನಿ ಮೇಲುಗೈ ಸಾಧಿಸಿದರೆ, ನಂತರದ ಮೂರು ಸೆಟ್‌ಗಳಲ್ಲಿ ಮುಸೆಟ್ಟಿ ಪಾರಮ್ಯ ಮೆರೆದರು.
12ನೇ ಶ್ರೇಯಾಂಕದ ಟಾಮಿ ಪಾಲ್ 6-3, 3-6, 7-6 (9/7), 3-6, 6-3ರ ಐದು ಸೆಟ್‌ಗಳ ಹೋರಾಟದಲ್ಲಿ ರಷ್ಯಾದ ಕರೆನ್ ಖಚನೋವ್ (24ನೇ ಶ್ರೇಯಾಂಕ) ಅವರನ್ನು ಸೋಲಿಸಿದರು.
ಭಾರತದ ಯುಕಿ ಭಾಂಬ್ರಿ, ಅವರ ಅಮೆರಿಕನ್ ಜೊತೆಗಾರ ರಾಬರ್ಟ್ ಗಾಲೊವೆ ಅವರು ಪುರುಷರ ಡಬಲ್ಸ್‌ನಲ್ಲಿ ಮೂರನೇ ಸುತ್ತಿಗೆ ಮುನ್ನಡೆದರು.
ಭಾಂಬ್ರಿ–ಗಾಲೊವೆ ಜೋಡಿ 6-7(4), 7-6(7), 6-3ರ ಮೂರು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಏಳನೇ ಶ್ರೇಯಾಂಕದ ನಿಕೋಲಾ ಮೆಕ್ಟಿಕ್ ಮತ್ತು ಮೈಕೆಲ್ ವೀನಸ್ (ಕ್ರೊಯೇಷ್ಯಾ) ಅವರಿಗೆ ಆಘಾತ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.