ಅರಿನಾ ಸಬಲೆಂಕಾ ಆಟದ ವೈಖರಿ
ಪ್ಯಾರಿಸ್: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಇಲ್ಲಿ ಭಾನುವಾರ ಆರಂಭಗೊಂಡ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಯಾಸವಾಗಿ ಎರಡನೇ ಸುತ್ತಿಗೆ ಮುನ್ನಡೆದರು.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ತಮ್ಮ ಎಂಟನೇ ವರ್ಷದ ಅಭಿಯಾನ ಆರಂಭಿಸಿದ ಬೆಲಾರಸ್‌ನ ತಾರೆ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 6-1, 6-0 ಅಂತರದಿಂದ ರಷ್ಯಾದ ಕಮಿಲ್ಲಾ ರಾಖಿಮೋವಾ ಅವರನ್ನು ಹಿಮ್ಮೆಟ್ಟಿಸಿದರು.
ಸತತ ಮೂರು ಬಾರಿ (2023ರಿಂದ 25) ಇಲ್ಲಿ ಚಾಂಪಿಯನ್ ಆಗಿರುವ ಇಗಾ ಶ್ವಾಂಟೆಕ್ ಪ್ರಸಕ್ತ ಋತುವಿನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಈ ಮಧ್ಯೆ 27 ವರ್ಷದ ಸಬಲೆಂಕಾ ನಾಲ್ಕನೇ ಗ್ರ್ಯಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ.
ಪ್ಯಾರಿಸ್ ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ ಅವರೂ ಶುಭಾರಂಭ ಮಾಡಿದರು. ಎಂಟನೇ ಶ್ರೇಯಾಂಕದ ಝೆಂಗ್ 6-4, 6-3ರಿಂದ ಫ್ರೆಂಚ್ ಓಪನ್ ಮಾಜಿ ರನ್ನರ್ ಅಪ್ ಅನಸ್ತೇಸಿಯಾ ಪಾವ್ಲಿಚೆಂಕೋವಾ (ರಷ್ಯಾ) ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು.
13ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ (ಉಕ್ರೇನ್) 6-1, 6-1ರಿಂದ ಟರ್ಕಿಯ ಝೆಯ್ನೆಪ್ ಸೊನ್ಮೆಜ್ ಅವರನ್ನು ಸೋಲಿಸಿದರು. ಈ ಮಧ್ಯೆ ಶ್ರೇಯಾಂಕರಹಿತ ಆಟಗಾರ್ತಿ ಇವಾ ಲೈಸ್ (ಜರ್ಮನಿ) 6-0, 6-3ರಿಂದ 28ನೇ ಶ್ರೇಯಾಂಕದ ಪೇಟನ್ ಸ್ಟಿಯರ್ನ್ಸ್ (ಅಮೆರಿಕ) ಅವರಿಗೆ ಆಘಾತ ನೀಡಿದರು.
ಪುರುಷರ ಸಿಂಗಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಲೊರೆಂಝೊ ಮುಸೆಟ್ಟಿ ಶುಭಾರಂಭ ಮಾಡಿದರು. ಇಟಲಿಯ ಆಟಗಾರ ಮೊದಲ ಸುತ್ತಿನಲ್ಲಿ 7–5, 6–2, 6–0ರಿಂದ ಜರ್ಮನಿಯ ಯಾನಿಕ್ ಹಾಫ್‌ಮನ್ ಅವರನ್ನು ಸೋಲಿಸಿದರು.
12ನೇ ಶ್ರೆಯಾಂಕದ ಟಾಮಿ ಪಾಲ್ (ಅಮೆರಿಕ) ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 6-7 (5/7), 6-2, 6-3, 6-1ರಿಂದ ಡೆನ್ಮಾರ್ಕ್‌ನ ಎಲ್ಮರ್ ಮೊಲ್ಲರ್ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.