
ಮಂಗಳೂರು: ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಹೆಣ್ಣುಮಕ್ಕಳನ್ನು ಬೆಳೆಸುವ ಉದ್ದೇಶದೊಂದಿಗೆ ‘ಗಿಯರ್ ಫಾರ್ ಗೋಲ್ಡ್’ ಯೋಜನೆಯಡಿ ನಗರದಲ್ಲಿ ಭಾನುವಾರ ನಡೆದ ಪ್ರತಿಭಾ ಶೋಧದಲ್ಲಿ ಬಾಲೆಯರು ಉತ್ಸಾಹದಿಂದ ಪಾಲ್ಗೊಂಡರು.
ಇನ್ಫೊಸಿಸ್ ಫೌಂಡೇಷನ್‌ನ ಯೋಜನೆಯನ್ನು ಬೆಂಗಳೂರಿನ ಗೋ ಫಾರ್ ಸ್ಪೋರ್ಟ್ಸ್ ಫೌಂಡೇಷನ್ ಅನುಷ್ಠಾನಗೊಳಿಸುತ್ತಿದ್ದು ಆಯ್ದ ಬಾಲಕಿಯರಿಗೆ ಕೇರಳದ ಕೋಯಿಕ್ಕೋಡ್‌ನ ಕಿನಾಲೂರ್‌ನಲ್ಲಿರುವ ಉಷಾ ಸ್ಕೂಲ್ ಆಪ್ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಸಿಗಲಿದೆ.
ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಶೋಧದಲ್ಲಿ ಕರ್ನಾಟಕದ 364 ಕ್ರೀಡೋತ್ಸಾಹಿಗಳು ಪಾಲ್ಗೊಂಡರು. ತಮಿಳುನಾಡಿನ ಮದುರೆಯಲ್ಲಿ ಜ.31ರಂದು ಮತ್ತು ಆಂಧ್ರಪ್ರದೇಶದ ವಿಜಯವಾಡದಲ್ಲಿ ಫೆ.7ರಂದು ಇದೇ ರೀತಿಯ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಮೂರೂ ಕಡೆಯಿಂದ ಆಯ್ದವರನ್ನು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಉಷಾ ಸ್ಕೂಲ್‌ನಲ್ಲಿ ನಡೆಯುವ ಅಂತಿಮ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುತ್ತದೆ. ಅಲ್ಲಿ ಆಯ್ಕೆಯಾದವರಿಗೆ ಉನ್ನತ ಮಟ್ಟದ ತರಬೇತಿ ಸಿಗಲಿದೆ.
ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹಾಗೂ ಅಹಮದಾಬಾದ್‌ನ ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿ ಅಧ್ಯಕ್ಷೆ, ಮಾಜಿ ಸ್ಪ್ರಿಂಟರ್ ಪಿ.ಟಿ ಉಷಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯ್ಕೆ ನಡೆಯಿತು. ದೈಹಿಕ ಕ್ಷಮತೆ ಮತ್ತು ಇತರ ಸಾಮರ್ಥ್ಯವನ್ನಷ್ಟೇ ಆರಂಭಿಕ ಹಂತದಲ್ಲಿ ಪರೀಕ್ಷಿಸಲಾಗುತ್ತದೆ. ಅಥ್ಲೀಟ್ ಆಗಲು ಅರ್ಹ ಎಂದು ತೋರಿದರೆ ನಿರ್ದಿಷ್ಟ ವಿಭಾಗದಲ್ಲಿ ತರಬೇತಿ ಸಿಗಲಿದೆ.
‘14 ವರ್ಷದೊಳಗಿನ ಬಾಲಕಿಯರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅವರಲ್ಲಿ ಅರ್ಹತೆ ಇರುವವರಿಗೆ ಉತ್ತಮ ತರಬೇತಿ ನೀಡಿದರೆ 2036ರ ಒಲಿಂಪಿಕ್ಸ್ ವೇಳೆಗೆ ಉತ್ತಮ ಅಥ್ಲೀಟ್ ಆಗಿ ಹೊರಹೊಮ್ಮಲಿದ್ದಾರೆ. ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತದ ಬಾಲೆಯರು ಚಿನ್ನ ಗೆಲ್ಲಬೇಕು ಎಂಬುದು ಉಷಾ ಸ್ಕೂಲ್‌ನ ಉದ್ದೇಶ’ ಎಂದು ನಿರ್ದೇಶಕ ವಿ. ಶ್ರೀನಿವಾಸನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ವರೆಗೆ ಕೇರಳದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಾರಿ ಇನ್ಫೊಸಿಸ್ ಫೌಂಡೇಷನ್ ಸಹಯೋಗ ಲಭಿಸಿದ್ದರಿಂದ ವ್ಯಾಪಕವಾಗಿ ಆಯೋಜಿಸಲಾಗುತ್ತಿದೆ. ಮದುರೆ, ವಿಜಯವಾಡ ಮುಂತಾದ ಸಣ್ಣ ನಗರಗಳಲ್ಲಿ ಶೋಧ ನಡೆಸುವ ಮೂಲಕ ಹಳ್ಳಿಗಳ ಪ್ರತಿಭೆಗಳನ್ನು ಬೆಳಕಿಗೆ ತರುವ ಗುರಿ ಹೊಂದಿದ್ದೇವೆ’ ಎಂದು ಶ್ರೀನಿವಾಸನ್ ಹೇಳಿದರು.
ಹೆಣ್ಣುಮಕ್ಕಳು ಕ್ರೀಡೆಯಲ್ಲಿ ಸಾಮರ್ಥ್ಯ ತೋರಬೇಕಾದರೆ ಅವರ ಪ್ರತಿಭಾ ಪ್ರದರ್ಶನಕ್ಕೆ ಪಾಲಕರು ಬೆನ್ನೆಲುಬು ಆಗಿ ನಿಲ್ಲಬೇಕು. ಸಣ್ಣ ವಯಸ್ಸಿನಲ್ಲೇ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಬೇಕಾದುದು ಇಂದಿನ ಅಗತ್ಯ.– ಪಿ.ಟಿ ಉಷಾ, ಮಾಜಿ ಸ್ಪ್ರಿಂಟರ್ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಸ್ಥಾಪಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.