ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌: ಕಿರಣ್‌, ತರುಣ್‌ ಶುಭಾರಂಭ

ಪಿಟಿಐ
Published 28 ಜನವರಿ 2026, 17:21 IST
Last Updated 28 ಜನವರಿ 2026, 17:21 IST
ಭಾರತದ ಕಿರಣ್‌ ಜಾರ್ಜ್‌
ಭಾರತದ ಕಿರಣ್‌ ಜಾರ್ಜ್‌   

ಬ್ಯಾಂಕಾಕ್‌: ಭಾರತದ ಕಿರಣ್‌ ಜಾರ್ಜ್‌ ಹಾಗೂ ತರುಣ್‌ ಮನ್ನೆಪಲ್ಲಿ ಅವರು ಥಾಯ್ಲೆಂಡ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಬುಧವಾರ ಶುಭಾರಂಭ ಮಾಡಿದರು.

ಏಳನೇ ಶ್ರೇಯಾಂಕ ಪಡೆದಿರುವ ಕಿರಣ್‌, ಮೊದಲ ಸುತ್ತಿನ ಪಂದ್ಯದಲ್ಲಿ 21–15, 21–9ರಿಂದ ನೇರ ಆಟಗಳಲ್ಲಿ ಮಲೇಷ್ಯಾದ ಶೋಲೆ ಐದಿಲ್‌ ಅವರನ್ನು ಮಣಿಸಿದರು. ಕೊಚ್ಚಿಯ ಆಟಗಾರ ಕೇವಲ 27 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ವಿಶ್ವಕ್ರಮಾಂಕದಲ್ಲಿ 60ನೇ ಸ್ಥಾನದಲ್ಲಿರುವ ಮಿಥುನ್‌ ಮಂಜುನಾಥ್‌ ಅವರು 21–12, 9–21, 21–17ರಿಂದ ಎಂಟನೇ ಶ್ರೇಯಾಂಕದ ಆಟಗಾರ, ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೊಹಾನಸನ್‌ ವಿರುದ್ಧ ಜಯ ಗಳಿಸಿದರು.

ADVERTISEMENT

ತರುಣ್‌ ಅವರು 22–20, 21–17ರಿಂದ ಆತಿಥೇಯ ರಾಷ್ಟ್ರದ ಕಾಂಟಫೊನ್‌ ವಾಂಗ್‌ಚರೋನ್‌ ಅವರನ್ನು ಸೋಲಿಸಿ, ಎರಡನೇ ಸುತ್ತಿಗೆ ಮುನ್ನಡೆದರು.

ಆದರೆ, ಕಣದಲ್ಲಿದ್ದ ಭಾರತದ ಇತರ ಆಟಗಾರರಾದ ಪ್ರಿಯಾಂಶು ರಾಜಾವತ್‌, ಮನರಾಜ್‌ ಸಿಂಗ್‌ ಹಾಗೂ ಎಸ್‌.ಶಂಕರ್ ಮುತ್ತುಸ್ವಾಮಿ ಸುಬ್ರಮಣ್ಯನ್‌ ಅವರು ತಮ್ಮ ತಮ್ಮ ಪಂದ್ಯಗಳಲ್ಲಿ ಸೋತರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಉದಯೋನ್ಮುಖ ಆಟಗಾರ್ತಿ ಅನ್ಮೋಲ್‌ ಖರ್ಬ್‌ ಅವರು 21–12, 21–12ರಿಂದ ಹಾಂಗ್‌ಕಾಂಗ್‌ನ ಲೊ ಸಿನ್‌ ಯಾನ್‌ ಹ್ಯಾಪಿ ವಿರುದ್ಧ ಸುಲಭ ಜಯ ಸಾಧಿಸಿದರು. ಇಶಾರಾಣಿ ಬರೂವಾ ಅವರು 21–12, 21–8ರಿಂದ ಸ್ವದೇಶದ ಮಾಳವಿಕಾ ಬನ್ಸೋದ್‌ ಎದುರು ನಿರಾಯಾಸವಾಗಿ ಗೆದ್ದರು.

ಅನುಪಮಾ ಉಪಾಧ್ಯಾಯ ಅವರು 13–21, 20–22ರಲ್ಲಿ ತೈವಾನ್‌ನ ಪೆಂಗ್‌ ಯು ವೀಯಿ ವಿರುದ್ಧ ಸೋತರು. ಶ್ರೀಯಾಂಶಿ ವಾಲಿಶೆಟ್ಟಿ ಅವರು 14–21, 21–13, 21–19ರಿಂದ ಕೆನಡಾದ ವೆನ್‌ ಯು ಝಂಗ್‌ ವಿರುದ್ಧ ಜಯಿಸಿದರು.

ತಾನ್ಯಾ ಹೇಮಂತ‌್ ಅವರು 11–21, 13–21ರಿಂದ ಏಳನೇ ಶ್ರೇಯಾಂಕದ ಆಟಗಾರ್ತಿ, ಡೆನ್ಮಾರ್ಕ್‌ನ ಜೂಲಿ ಜೇಕಬ್‌ಸನ್‌ ಅವರಿಗೆ ಶರಣಾದರು.

ಮಿಶ್ರ ಡಬಲ್ಸ್‌ನಲ್ಲಿ ಧ್ರುವ್‌ ರಾವತ್‌ ಹಾಗೂ ಮನೀಷಾ ಕೆ. ಅವರು 16–21, 7–21ರಿಂದ ತೈವಾನ್‌ನ ಝಿ ವೀಯಿ ಹೆ– ಲಿಯಾಂಗ್‌ ಶಿಂಗ್‌ ಸನ್‌ ಜೋಡಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.