ADVERTISEMENT

ಜಿಎಸ್‌ಟಿಯಿಂದ ಕುದುರೆ ರೇಸಿಂಗ್‌ಗೆ ಪೆಟ್ಟು: ಬೆಂಗಳೂರು ಟರ್ಫ್‌ ಕ್ಲಬ್ ಮುಖ್ಯಸ್ಥ ಆತಂಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 16:28 IST
Last Updated 12 ಜುಲೈ 2023, 16:28 IST
   

ಬೆಂಗಳೂರು: ಕುದುರೆ ರೇಸಿಂಗ್‌ ಮೇಲೆ ಶೇ 28ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದರಿಂದ ದೊಡ್ಡ ನಷ್ಟವಾಗಲಿದೆ ಎಂದು ಬೆಂಗಳೂರು ಟರ್ಫ್‌ ಕ್ಲಬ್ ಮುಖ್ಯಸ್ಥ ಶಿವಕುಮಾರ್ ಖೇಣಿ ಹೇಳಿದ್ದಾರೆ.

ಕುದುರೆ ರೇಸಿಂಗ್, ಕಸಿನೋ ಮತ್ತು ಆನ್‌ಲೈನ್ ಗೇಮಿಂಗ್‌ಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದು ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದರಿಂದಾಗಿ ರೇಸಿಂಗ್‌ನಲ್ಲಿ ಆಗುವ ನಷ್ಟದ ಕುರಿತು ಹಣಕಾಸು ಇಲಾಖೆಗೆ ಮನವರಿಕೆ ಮಾಡಲು ಟರ್ಫ್‌ ಅಥಾರಿಟಿಸ್ ಆಫ್ ಇಂಡಿಯಾ (ಟಿಎಐ) ಮುಂದಾಗಿದೆ. 

‘ಕಳೆದ ಕೆಲವು ದಿನಗಳ ಹಿಂದೆ  ಹಣಕಾಸು ಕಾರ್ಯದರ್ಶಿಗಳೊಂದಿಗೆ ಈ ವಿಷಯ ಮಾತನಾಡಿದ್ದೆವು.  ಅದರಿಂದ ಜಿಎಸ್‌ಟಿ ವಿಷಯದಲ್ಲಿ ರಿಯಾಯಿತಿ ಸಿಗಬಹುದೆಂಬ ಭರವಸೆ ಇತ್ತು. ಆದರೆ  ಹಾಗಾಗಿಲ್ಲ. ಆದ್ದರಿಂದ ಬರುವ ಭಾನುವಾರ ಎಲ್ಲ ಟರ್ಫ್‌ ಕ್ಲಬ್‌ಗಳೊಂದಿಗೆ ಸಭೆ ನಡೆಸಲಿದ್ದೇವೆ. ಈ ವಿಷಯವನ್ನು ನಿರ್ವಹಿಸುವ ಕುರಿತು ನಮ್ಮ ಬಳಿ  ಪ್ರಸ್ತಾವಗಳು ಇವೆ. ನಮ್ಮ ವಕೀಲರ ಸಲಹೆ ಪಡೆಯುತ್ತೇವೆ. ಕಾನೂನಾತ್ಮಕ ಹಾದಿಯ ಕುರಿತು ಚರ್ಚಿಸಲಾಗುವುದು‘‘ ಎಂದು ಖೇಣಿ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಪ್ರತಿ 100 ರೂಪಾಯಿ ಬೆಟ್ಟಿಂಗ್‌ ಮಾಡಿದಾಗ ಅದರಲ್ಲಿ ಶೇ 28 ಜಿಎಸ್‌ಟಿಗೆ ಹೋಗುತ್ತದೆ. ಶೇ 30 ಟಿಡಿಎಸ್‌ (ಮೂಲದಲ್ಲಿ ತೆರಿಗೆ ಕಡಿತ) ಹಾಗೂ ಶೇ 6ರಷ್ಟು ಹೆಚ್ಚುವರಿ ಭಾಗವು ಕ್ಲಬ್‌ ಕಮಿಷನ್ ಕಡಿತವಾಗುತ್ತದೆ. ಪಂಟರ್‌ಗಳಿಗೆ ಕನಿಷ್ಠ ಆದಾಯ ಸಿಗುತ್ತದೆ‘ ಎಂದೂ ಅವರು ವಿವರಿಸಿದರು. 

’ಇದರಿಂದ ರೇಸ್‌ಪ್ರಿಯ ಜನರು ಹೆಚ್ಚು ಆದಾಯ ಗಳಿಸಲು ವಾಮಮಾರ್ಗ ಹಿಡಿಯುವ ಸಾಧ್ಯತೆ ಇದೆ' ಎಂದೂ ಆತಂಕ ವ್ಯಕ್ತಪಡಿಸಿದರು.

’15 ದಿನಗಳ ಹಿಂದೆ ದೆಹಲಿಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಭೇಟಿಯಾಗಿದ್ದೆವು. ಅವರಿಗೆ ಸಮಸ್ಯೆಯನ್ನು ವಿವರಿಸಿದ್ದೆವು. ಅವರೂ ಸಂಪೂರ್ಣ ವಿಷಯ ಅರ್ಥ ಮಾಡಿಕೊಂಡಂತೆ ಅನಿಸಿತ್ತು. ಭವಿಷ್ಯದಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಬಹುದು‘ ಎಂದು ಖೇಣಿ ಹೇಳಿದರು.  ಟಿಡಿಎಸ್‌ನಲ್ಲಿ ರಿಯಾಯಿತಿ ಸಿಗಬಹುದೆಂಬ ನಿರೀಕ್ಷೆಯೂ ಇದೆ.  

‘ಈ ಕ್ರಮವು ರೇಸಿಂಗ್‌ ಸಮುದಾಯಕ್ಕೆ ಬಹಳ ದೊಡ್ಡ ಆತಂಕ ತಂದೊಡ್ಡಿದೆ. ಇದರಿಂದಾಗಿ ಆದಾಯ ನೆಲಕಚ್ಚುವ ಅಪಾಯವಿದೆ. ₹ 2000 ಕೋಟಿಯಿಂದ ₹ 200 ಕೋಟಿಗೆ ಆದಾಯ ಕುಸಿಯಬಹುದು. ಇದು ನುಂಗಲಾರದ ತುತ್ತು. ಸರ್ಕಾರಕ್ಕೆ ಕುದುರೆ ರೇಸಿಂಗ್ ಬಗ್ಗೆ ನಕಾರಾತ್ಮಕ ಧೋರಣೆ ಇರಬಹುದು. ಆದರೆ ರೇಸಿಂಗ್‌ ಚಟುವಟಿಕೆಯಿಂದ ಸರ್ಕಾರಕ್ಕೂ ಉತ್ತಮ ಆದಾಯ ದೊರೆಯುತ್ತದೆ ಎಂಬುದನ್ನು ಮನಗಾಣುತ್ತಿಲ್ಲ. ಹಾಂಗ್‌ಕಾಂಗ್‌ ದೇಶವು ಇದಕ್ಕೆ ಉತ್ತಮ ಉದಾಹರಣೆ. ಅಲ್ಲಿ ರೇಸಿಂಗ್‌ನಿಂದ ವಾರ್ಷಿಕ ₹ 150,000 ಕೋಟಿ ಅದಾಯ ಬರುತ್ತದೆ. ಅದರಲ್ಲಿಯೇ ₹ 3000–4000 ಕೋಟಿ ದತ್ತಿ ಕಾರ್ಯಗಳಿಗೆ ದೇಣಿಗೆಯಾಗಿ ನೀಡಲಾಗುತ್ತದೆ‘ ಎಂದು ಬಿಟಿಸಿಯ ಸೀನಿಯರ್ ಸ್ಟೀವರ್ಡ್ ಕೆ. ಬೆಳ್ಳಿಯಪ್ಪ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.