ಪ್ರಾಗ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್, ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ ಎಂಟನೇ ಸುತ್ತಿನಲ್ಲಿ ಗುರುವಾರ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರು. ಆದರೆ ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಪೋಲೆಂಡ್‌ನ ಮ್ಯಾಥ್ಯೂಸ್ ಬಾರ್ಟೆಲ್ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.
ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರು ಇನ್ನೂ ಒಂದು ಸುತ್ತು ಉಳಿದಿರುವಂತೆ ಈ ಟೂರ್ನಿಯನ್ನು ಗೆದ್ದುಕೊಂಡರು. ಅವರು ಎಂಟನೇ ಸುತ್ತಿನಲ್ಲಿ ಇರಾನ್‌ನ ಪರ್ಹಾಮ್ ಮಘಸೂಡ್ಲು ಅವರನ್ನು ಮಣಿಸಿದರು. ಅವರು ಆರು ಪಾಯಿಂಟ್ಸ್ ಸಂಗ್ರಹಿಸಿದ್ದು ಇತರರಿಗಿಂತ 1.5 ಪಾಯಿಂಟ್ಸ್ ಮುಂದಿರುವ ಕಾರಣ ಪ್ರಶಸ್ತಿ ಗೆಲ್ಲುವುದು ಖಚಿತವಾಯಿತು. ಜೊತೆಗೆ ಇಲ್ಲಿನ ಅಮೋಘ ಪ್ರದರ್ಶನದ ಕಾರಣ ಹೆಚ್ಚು ರ‍್ಯಾಂಕಿಂಗ್ ಪಾಯಿಂಟ್‌ಗಳೊಡನೆ ಅವರು ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಲಿದ್ದಾರೆ.
ಕಣದಲ್ಲಿರುವ ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ಅವರು ರುಮೇನಿಯಾದ ರಿಚರ್ಡ್ ರ್‍ಯಾಪೋರ್ಟ್ ಜೊತೆ ಡ್ರಾ ಮಾಡಿಕೊಂಡರು.
ಕೊನೆಯ ಸುತ್ತು ಬಾಕಿಯಿರುವಂತೆ– ಮಘಸೂಡ್ಲು, ಪ್ರಜ್ಞಾನಂದ ಮತ್ತು ಝೆಕ್ ರಿಪಬ್ಲಿಕ್‌ನ ಎನ್ಗುಯೆನ್ ಥಾ ದೈವಾನ್ ಅವರು ತಲಾ 4.5 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಗುಕೇಶ್ (4) ಆರಂಭದಿಂದಲೇ ಆಕ್ರಂಣಕಾರಿ ಆಟವಾಡಿ ಕೀಮರ್ ವಿರುದ್ಧ 27 ನಡೆಗಳಲ್ಲಿ ಜಯಗಳಿಸಿದರು. ಕೀಮರ್ ಮತ್ತು ಬಾರ್ಟೆಲ್ ತಲಾ ಮೂರು ಅಂಕ ಗಳಿಸಿದ್ದಾರೆ. ಎನ್ಗುಯೆನ್ ಜೊತೆ ಡ್ರಾ ಮಾಡಿಕೊಂಡ ಸ್ಥಳೀಯ ಆಟಗಾರ ಡೇವಿಡ್ ನವಾರ ಸಹ ನಾಲ್ಕು ಅಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.