ಗುಕೇಶ್
ಪಿಟಿಐ ಸಂಗ್ರಹ ಚಿತ್ರ
ಸ್ಟಾವೆಂಜರ್ (ನಾರ್ವೆ): ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಪ್ರತಿಷ್ಠಿತ ನಾರ್ವೆ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ಚೀನಾದ ವೀ ಯಿ ಅವರನ್ನು 40 ನಡೆಗಳಲ್ಲಿ ಸೋಲಿಸಿ ಪೂರ್ಣ ಮೂರು ಪಾಯಿಂಟ್ ಗಳಿಸಿದ್ದಾರೆ. ಆ ಮೂಲಕ ಆತಿಥೇಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.
ಗುಕೇಶ್, ಇನ್ನೊಂದು ಸುತ್ತು ಉಳಿದಿರುವಂತೆ 14.5 ಪಾಯಿಂಟ್ಸ್ ಕಲೆಹಾಕಿದ್ದಾರೆ. ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್‌ಸನ್ (15 ಪಾಯಿಂಟ್ಸ್) ಗುರುವಾರ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನ (12.5) ವಿರುದ್ಧ ಸೋಲುವ ಅಪಾಯದಿಂದ ಹೇಗೊ ಪಾರಾಗಿ ಪೂರ್ಣ ಮೂರು ಪಾಯಿಂಟ್ಸ್ ಪಡೆಯವಲ್ಲಿ ಯಶಸ್ವಿ ಆಗಿದ್ದಾರೆ.
ಅಂತಿಮ (10ನೇ) ಸುತ್ತಿನಲ್ಲಿ 19 ವರ್ಷ ವಯಸ್ಸಿನ ಗುಕೇಶ್, ಕರುವಾನ ವಿರುದ್ಧ, ಕಾರ್ಲ್‌ಸನ್ ಅವರು ಭಾರತದ ಅರ್ಜುನ್ ಇರಿಗೇಶಿ ವಿರುದ್ಧ ಆಡಲಿದ್ದಾರೆ. ಪ್ರಶಸ್ತಿ ಗೆದ್ದ ಆಟಗಾರ ಟ್ರೋಫಿಯ ಜೊತೆ ₹59 ಲಕ್ಷ ಬಹುಮಾನ ಪಡೆಯಲಿದ್ದಾರೆ.
ಕಾರ್ಲ್‌ಸನ್ ಗೆದ್ದರೆ ಏಳನೇ ಬಾರಿ ಇಲ್ಲಿ ಚಾಂಪಿಯನ್ ಆಗುತ್ತಾರೆ. ಗುಕೇಶ್ ಎರಡನೇ ಬಾರಿ ಇಲ್ಲಿ ಆಡುತ್ತಿದ್ದು ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಅಮೆರಿಕದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್ ಹಿಕಾರು ನಕಾಮುರ ಅವರು 13 ಪಾಯಿಂಟ್ಸ್ ಹೊಂದಿದ್ದು, ಪ್ರಶಸ್ತಿಯ ಕ್ಷೀಣ ಅವಕಾಶ ಅವರಿಗೂ ಇದೆ. ಅದು ಇತರ ಫಲಿತಾಂಶಗಳನ್ನು ಅವಲಂಬಿಸಿದೆ. ನಕಾಮುರ ಒಂಬತ್ತನೇ ಸುತ್ತಿನಲ್ಲಿ ಇರಿಗೇಶಿ (11.5) ಅವರನ್ನು ಆರ್ಮ್‌ಗೆಡನ್‌ನಲ್ಲಿ ಸೋಲಿಸಿದರು. ಕ್ಲಾಸಿಕಲ್ ಪಂದ್ಯ ಡ್ರಾ ಆಗಿದ್ದರಿಂದ, ಟೂರ್ನಿಯ ನಿಯಮದ ಪ್ರಕಾರ ಟೈಬ್ರೇಕರ್ ಪಂದ್ಯ ಆಡಲಾಗುತ್ತದೆ.
ವೀ ಯಿ (8) ಕೊನೆಯ ಸ್ಥಾನದಲ್ಲಿದ್ದಾರೆ.
ಸುವರ್ಣಾಕಾಶ ಕೈಚೆಲ್ಲಿದ ಹಂಪಿ: ಮಹಿಳೆಯರ ವಿಭಾಗದಲ್ಲಿ, ಎರಡು ಬಾರಿಯ ವಿಶ್ವ ರ‍್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ (13.5) ಅವರು ಚೀನಾದ ಲೀ ಟಿಂಗ್ಜಿ (13) ವಿರುದ್ಧ ಸೋತರು. ಗೆದ್ದಲ್ಲಿ ಅವರಿಗೆ ಪ್ರಶಸ್ತಿ ಖಾತರಿಯಾಗುತಿತ್ತು.
ಎಂಟನ ಸುತ್ತಿನವರೆಗೆ ಮುನ್ನಡೆಯಲ್ಲಿದ್ದ ಹಂಪಿ ಎರಡನೇ ಸ್ಥಾನಕ್ಕೆ ಸರಿದರು. ವಿಶ್ವ ಚಾಂಪಿಯನ್, ಚೀನಾದ ಜು ವೆನ್‌ಜುನ್ (12.5) ಅವರನ್ನು ಸೋಲಿಸಿದ ಉಕ್ರೇನಿನ ಜಿಎಂ ಅನ್ನಾ ಮುಝಿಚುಕ್ (15.5) ಅಗ್ರಸ್ಥಾನಕ್ಕೇರಿದರು. ಆರ್.ವೈಶಾಲಿ (9.5), ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ್ ಸಾರಾ ಖಾದೆಮ್ (9) ಅವರಿಗೆ ಮಣಿದರು.
ಹಂಪಿ ಅಂತಿಮ ಸುತ್ತಿನಲ್ಲಿ ಜು ಅವರನ್ನು ಎದುರಿಸಲಿದ್ದಾರೆ. ಮುಝಿಚುಕ್ ಇನ್ನೊಂದು ಪಂದ್ಯದಲ್ಲಿ ವೈಶಾಲಿ ವಿರುದ್ಧ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.