ಸ್ಟಾವೆಂಜರ್ (ನಾರ್ವೆ): ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಹಿಕಾರು ನಕಾಮುರ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರ ಗೆಲುವಿನ ಸರಪಣಿಯನ್ನು ಮುರಿದು ಅಮೋಘ ಜಯ ಸಾಧಿಸಿದರು. ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ ಅವರು ಮಂಗಳವಾರ ಎಂಟನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದರು.
ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಹಾಗೂ ಮಾಜಿ ಚಾಂಪಿಯನ್ ನಕಾಮುರ ಅವರು 19 ವರ್ಷ ವಯಸ್ಸಿನ ಗುಕೇಶ್ ಅವರನ್ನು ಸೋಲಿಸು ಮೂಲಕ ಮೂರನೇ ಸುತ್ತಿನಲ್ಲಿ ಅನುಭವಿಸಿದ ಸೋಲಿಗೆ ಸೇಡನ್ನೂ ತೀರಿಸಿಕೊಂಡರು. ನಾಲ್ಕೂವರೆ ಗಂಟೆ ಕಾಲ ಬೆಳೆದ ಎಂಟನೇ ಸುತ್ತಿನ ಪಂದ್ಯದಲ್ಲಿ 37 ವರ್ಷ ವಯಸ್ಸಿನ ನಕಾಮುರ ಅವರು ಗುಕೇಶ್ ಅವರಿಗೆ ಚೇತರಿಸಲು ಸ್ವಲ್ಪವೂ ಅವಕಾಶ ನೀಡಲಿಲ್ಲ.
ಇನ್ನು ಎರಡು ಸುತ್ತಿನ ಪಂದ್ಯಗಳು ಉಳಿದಿದ್ದು, ಗುಕೇಶ್ ಮತ್ತು ನಕಾಮುರ ತಲಾ 11.5 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇರಿಗೇಶಿ ಅವರಿಗೆ ಸೋತರೂ ಕರುವಾನ 12.5 ಪಾಯಿಂಟ್ಸ್ ಕಲೆಹಾಕಿದ್ದು ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಕಾರ್ಲ್‌ಸನ್ (12 ಪಾಯಿಂಟ್) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಎರಡು ಸುತ್ತಿನ ಆಟ ಮಾತ್ರ ಉಳಿದಿದೆ.
ಕಾರ್ಲ್‌ಸನ್ ಎಂಟನೇ ಸುತ್ತಿನಲ್ಲಿ ಚೀನಾದ ವೀ ಯಿ (8) ಅವರ ಎದುರು ಆರ್ಮ್‌ಗೆಡನ್‌ನಲ್ಲಿ ಸೋಲನುಭವಿಸಬೇಕಾಯಿತು. ಇರಿಗೇಶಿ (10.5 ಪಾಯಿಂಟ್ಸ್) ಆರನೇ ಸ್ಥಾನದಲ್ಲಿದ್ದಾರೆ.
ಹಂಪಿಗೆ ಮುನ್ನಡೆ:
ಎರಡು ಬಾರಿಯ ವಿಶ್ವ ರ‍್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ (13.5 ಪಾಯಿಂಟ್ಸ್) ಅವರು ಮಹಿಳಾ ವಿಭಾಗದ ಎಂಟನೇ ಸುತ್ತಿನಲ್ಲಿ ಸ್ಪೇನ್‌ನ ಸಾರಾ ಖಾಡೆಮ್ ಅವರನ್ನು ಮಣಿಸಿ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು. ಈ ವಿಭಾಗದ ಇತರ ಎರಡು ಪಂದ್ಯಗಳು ಆರ್ಮ್‌ಗೆಡನ್‌ವರೆಗೆ ಬೆಳೆದವು.
ವಿಶ್ವ ಚಾಂಪಿಯನ್, ಚೀನಾದ ವೆನ್‌ಜುನ್ (12.5) ಎರಡನೇ ಸ್ಥಾನದಲ್ಲಿದ್ದಾರೆ. ಜು ಅವರ ಆರು ಪಂದ್ಯಗಳ ಗೆಲುವಿನ ಸರಣಿಯನ್ನು ಭಾರತದ ಆರ್.ವೈಶಾಲಿ ಅವರು ಟೈಬ್ರೇಕ್ ಪಂದ್ಯದ ಮೂಲಕ ಮುರಿದರು. ವೈಶಾಲಿ (9.5) ಐದನೇ ಸ್ಥಾನದಲ್ಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಉಕ್ರೇನಿನ ಅನ್ನಾ ಮುಝಿಚುಕ್ (12.5 ಪಾಯಿಂಟ್ಸ್), ಚೀನಾದ ಲೀ ಟಿಂಗ್ಜೀ (10 ಪಾಯಿಂಟ್ಸ್) ಅವರನ್ನು ಟೈಬ್ರೇಕ್‌ನಲ್ಲಿ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.