ನವದೆಹಲಿ: ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಇದೇ ತಿಂಗಳ 30ರಂದು ಗೋವಾದಲ್ಲಿ ಆರಂಭವಾಗಲಿರುವ ಫಿಡೆ ವಿಶ್ವಕಪ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಅರ್ಜುನ್ ಇರಿಗೇಶಿ ಮತ್ತು ಆರ್.ಪ್ರಜ್ಞಾನಂದ ಎರಡು ಮತ್ತು ಮೂರನೇ ಶ್ರೇಯಾಂಕ ಗಳಿಸಿದ್ದಾರೆ.
ನವೆಂಬರ್ 27ರಂದು ಕೊನೆಗೊಳ್ಳಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಹಲವು ತಾರಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ನೆದರ್ಲೆಂಡ್ಸ್‌ನ ಅನಿಶ್ ಗಿರಿ ನಾಲ್ಕನೇ ಶ್ರೇಯಾಂಕ ಗಳಿಸಿದ್ದಾರೆ.
ಸುಮಾರು ₹17.75 ಕೋಟಿ ಬಹುಮಾನ ಮೊತ್ತ ಹೊಂದಿರುವ ಈ ಟೂರ್ನಿಯಲ್ಲಿ ವಿಶ್ವದ 206 ಆಟಗಾರರು ಭಾಗವಹಿಸಲಿದ್ದಾರೆ. ಆಕರ್ಷಕ ಬಹುಮಾನದ ಜೊತೆ ಈ ವಿಶ್ವಕಪ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದವರು 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅವಕಾಶ ಗಳಿಸಲಿದ್ದಾರೆ.
ಅಮೆರಿಕದ ವೆಸ್ಲಿ ಸೊ ಐದನೇ ಶ್ರೇಯಾಂಕ ಗಳಿಸಿದ್ದಾರೆ. ಜರ್ಮನಿಯ ವಿನ್ಸೆಂಟ್ ಕೀಮರ್, ಚೀನಾದ ವೀ ಯಿ, ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್, ಅಜರ್‌ಬೈಜಾನಿನ ಶಕ್ರಿಯಾರ್ ಮೆಮೆಡ್ಯರೋವ್ ಮತ್ತು ಅಮೆರಿಕದ ಹ್ಯಾನ್ಸ್ ನೀಮನ್ ಕ್ರಮವಾಗಿ ಆರರಿಂದ ಹತ್ತರವರೆಗಿನ ಶ್ರೇಯಾಂಕಗಳನ್ನು ಗಳಿಸಿದ್ದಾರೆ.
ಜುಲೈನಲ್ಲಿ ನಡೆದ ಮಹಿಳಾ ವಿಭಾಗದ ವಿಶ್ವಕಪ್‌ನಲ್ಲಿ ಭಾರತದ ದಿವ್ಯಾ ದೇಶಮುಖ್ ಚಾಂಪಿಯನ್ ಆಗಿದ್ದರು. ಫೈನಲ್‌ನಲ್ಲಿ ಸ್ವದೇಶದ ಕೋನೇರು ಹಂಪಿ ವಿರುದ್ಧ ಜಯಗಳಿಸಿದ್ದರು. ದಿವ್ಯಾ ಅವರು ಈ ಓಪನ್ ವಿಭಾಗದ ಟೂರ್ನಿಗೆ ವೈಲ್ಡ್ ಕಾರ್ಡ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.