ಸ್ಟಾವೆಂಜರ್ (ನಾರ್ವೆ): ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದರು. ಸೋಮವಾರ ಸ್ವದೇಶದ ಅರ್ಜುನ್ ಇರಿಗೇಶಿ ಅವರನ್ನು ಮಣಿಸಿ ಎರಡನೇ ಸ್ಥಾನಕ್ಕೆ ಏರಿದರು.
ಭಾನುವಾರ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಆಘಾತ ನೀಡಿದ್ದ 19 ವರ್ಷದ ವಯಸ್ಸಿನ ಗುಕೇಶ್ ಕ್ಲಾಸಿಕಲ್ ಏಳನೇ ಸುತ್ತಿನಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡು ಜಯ ಸಾಧಿಸಿದರು. ಕ್ಲಾಸಿಕಲ್ ಸ್ಪರ್ಧೆಯಲ್ಲಿ ಇರಿಗೇಶಿ (7.5) ವಿರುದ್ಧ ಗುಕೇಶ್ ಅವರಿಗೆ ದೊರೆತ ಮೊದಲ ಗೆಲುವು ಇದಾಗಿದೆ. ಈ ಗೆಲುವಿನೊಂದಿಗೆ ಅವರು 11.5 ಅಂಕ ಸಂಪಾದಿಸಿ, ಕಾರ್ಲ್‌ಸನ್ (11) ಅವರನ್ನು ಹಿಂದಿಕ್ಕಿದರು.
ಫೆಬ್ರುವರಿಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಇರಿಗೇಶಿ ವಿರುದ್ಧ ಕೊನೆಯ ಸುತ್ತಿನಲ್ಲಿ ಸೋತು ಗುಕೇಶ್ ಅವರು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿದ್ದರು. ಅಲ್ಲದೆ, ಇಲ್ಲೂ ಎರಡನೇ ಸುತ್ತಿನಲ್ಲಿ ಗುಕೇಶ್ ವಿರುದ್ಧ ಇರಿಗೇಶಿ ಜಯ ಸಾಧಿಸಿದ್ದರು. ಈ ಸೋಲಿಗೆ ಗುಕೇಶ್ ಮುಯ್ಯಿ ತೀರಿಸಿಕೊಂಡರು.
ಇನ್ನೂ ಮೂರು ಸುತ್ತುಗಳು ಬಾಕಿ ಇರುವಂತೆ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ 12.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರು ಚೀನಾದ ವೀ ಯಿ (6.5) ಅವರನ್ನು ಸೋಲಿಸಿದರು.
ಆತಿಥೇಯ ನಾರ್ವೆಯ ಕಾರ್ಲ್‌ಸನ್ ‘ಆರ್ಮ್‌ಗೆಡನ್’ನಲ್ಲಿ ವಿಶ್ವದ ಎರಡನೇ ರ‍್ಯಾಂಕ್‌ನ ಹಿಕಾರು ನಕಮುರಾ (8.5) ವಿರುದ್ಧ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.