ADVERTISEMENT

ಹ್ಯಾಂಡ್‌ಬಾಲ್‌ನಲ್ಲಿ ಶರಣ್ಯಾ ಮಿಂಚು..!

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 16:54 IST
Last Updated 19 ಜೂನ್ 2019, 16:54 IST
ಪ್ರಶಸ್ತಿಗಳೊಂದಿಗೆ ಶರಣ್ಯಾ ಕೆ.ಎಸ್.
ಪ್ರಶಸ್ತಿಗಳೊಂದಿಗೆ ಶರಣ್ಯಾ ಕೆ.ಎಸ್.   

ವಿರಾಜಪೇಟೆ: ಪಟ್ಟಣದ ಗಾಂಧಿನಗರದ ಶರಣ್ಯಾ ಕೆ.ಎಸ್. ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಒಂಬತ್ತು ಬಾರಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.

ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ, ಈ ಸಾಲಿನಲ್ಲಿ ದ್ವಿತೀಯ ಪಿಯುನಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುವ ಶರಣ್ಯಾ, ಹ್ಯಾಂಡ್‌ಬಾಲ್‌ನಲ್ಲಿ ವಿವಿಧ ವಿಭಾಗದಲ್ಲಿ 9 ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಪ್ರತಿಭಾನ್ವಿತೆ.

ಶರಣ್ಯಾ ಪಟ್ಟಣದ ಗಾಂಧಿನಗರದ ನಿವಾಸಿ ಕೆ.ಜಿ.ಶಶಿಧರ್ ಹಾಗೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಸಿ.ಕೆ.ಭಾಗ್ಯಲಕ್ಷ್ಮೀ ದಂಪತಿಯ ಪುತ್ರಿ.

ADVERTISEMENT

ಪ್ರಾಥಮಿಕ ಹಂತದಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡ ಶರಣ್ಯಾ, 2013ರಲ್ಲಿ ಲಕ್ನೋದಲ್ಲಿ ನಡೆದ 15ನೇ ಮಿನಿ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌, 2015ರ ಜನವರಿಯಲ್ಲಿ ತೆಲಂಗಾಣದಲ್ಲಿ ನಡೆದ 31ನೇ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌, ಮೇ ನಲ್ಲಿ ಪುಣೆಯಲ್ಲಿ ನಡೆದ 60ನೇ ರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಟ, ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ 61ನೇ ರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಟ.

2016ರಲ್ಲಿ ಹರಿಯಾಣದ ಸೋನಿಪಟ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಗ್ರಾಮೀಣ ಕ್ರೀಡಾಕೂಟ, 2017ರಲ್ಲಿ ಬೆಂಗಳೂರಿನಲ್ಲಿ ನಡೆದ 62ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟ, 2017ರಲ್ಲಿ ರಾಣಿಬೆನ್ನೂರಿನಲ್ಲಿ ನಡೆದ 40ನೇ ರಾಷ್ಟ್ರೀಯ ಕಿರಿಯರ ಚಾಂಪಿಯನ್‌ಶಿಪ್‌, 2018ರಲ್ಲಿ ವಾರಂಗಲ್‌ನಲ್ಲಿ ನಡೆದ ಕಿರಿಯರ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟ, 2019ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಶರಣ್ಯಾ ಹ್ಯಾಂಡ್‌ಬಾಲ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, 2015ರಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, 2018ರಲ್ಲಿ ಕಲಬುರ್ಗಿಯಲ್ಲಿ ನಡೆದ ಪದವಿ ಪೂರ್ವ ವಿಭಾಗದ ಕ್ರೀಡಾಕೂಟದಲ್ಲಿ ಪ್ರಥಮ, 2018ರಲ್ಲಿ ಮೈಸೂರಿನಲ್ಲಿ ನಡೆದ 'ಮುಖ್ಯಮಂತ್ರಿ ಕಪ್' ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ, 2019ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹ್ಯಾಂಡ್‌ಬಾಲ್‌ ಅಲ್ಲದೇ ಬಾಸ್ಕೆಟ್‌ಬಾಲ್, ನೆಟ್‌ಬಾಲ್, ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಹಲ ಬಾರಿ ಭಾಗವಹಿಸಿ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಶರಣ್ಯಾ ತಾಯಿ ಸಿ.ಕೆ.ಭಾಗ್ಯಲಕ್ಷ್ಮೀ, ಸಹೋದರ ಸಚಿನ್ ಕೂಡ ಉತ್ತಮ ಕ್ರೀಡಾಪಟು. ಇದೀಗ ದ್ವಿತೀಯ ಪಿಯು ಮುಗಿಸಿರುವ ಶರಣ್ಯಾ ಭೌತಶಾಸ್ತ್ರ ಅಥವಾ ಗಣಿತ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುವ ಗುರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.