ADVERTISEMENT

Asian Games Hockey: ಜಪಾನ್ ಮಣಿಸಿ ಚಿನ್ನದ ಪದಕ ಗೆದ್ದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2023, 12:20 IST
Last Updated 6 ಅಕ್ಟೋಬರ್ 2023, 12:20 IST
   

ಹಾಂಗ್‌ಝೌ: ಹರ್ಮನ್‌ಪ್ರೀತ್ ಸಿಂಗ್‌ ಅವರ ದಿಟ್ಟ ನಾಯಕತ್ವದ ನೆರವಿನಿಂದ ಭಾರತ ತಂಡ ಏಷ್ಯನ್ ಕ್ರೀಡಾಕೂಟದ ಹಾಕಿ ಫೈನಲ್‌ನಲ್ಲಿ ಕಳೆದ ಸಲದ ಚಾಂಪಿಯನ್‌ ಜಪಾನ್ ತಂಡವನ್ನು ಶುಕ್ರವಾರ 5–1 ಗೋಲುಗಳಿಂದ ಸದೆಬಡಿದು ಸ್ವರ್ಣ ಪದಕ ಗೆದ್ದುಕೊಂಡಿತು. ಈ ಗೆಲುವಿನೊಡನೆ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿತು.

ಏಷ್ಯನ್ ಗೇಮ್ಸ್‌ ಹಾಕಿಯಲ್ಲಿ ಇದು ಭಾರತಕ್ಕೆ ನಾಲ್ಕನೇ ಚಿನ್ನ. 9 ವರ್ಷಗಳ ಹಿಂದೆ, ದಕ್ಷಿಣ ಕೊರಿಯಾದ ಇಂಚಿಯಾನ್‌ ಕ್ರೀಡೆಗಳಲ್ಲಿ ಕೊನೆಯ ಬಾರಿ ಚಿನ್ನ ಗೆದ್ದುಕೊಂಡಿತ್ತು. 1966, 1998ರ ಕ್ರೀಡೆಗಳಲ್ಲೂ (ಎರಡೂ ಬಾರಿ ಬ್ಯಾಂಕಾಕ್‌) ಭಾರತ ಚಾಂಪಿಯನ್ ಆಗಿತ್ತು.

ಹರ್ಮನ್‌ಪ್ರೀತ್‌ 32ನೇ ಮತ್ತು 59ನೇ ನಿಮಿಷ ಎರಡು ಗೋಲುಗಳನ್ನು ಗಳಿಸಿದರು. ಅಮಿತ್‌ ರೋಹಿದಾಸ್‌ (36ನೇ ನಿಮಿಷ), ಮನ್‌ಪ್ರೀತ್‌ ಸಿಂಗ್ (25) ಮತ್ತು ಅಭಿಷೇಕ್ (48) ಉಳಿದ ಗೋಲುಗಳನ್ನು ಗಳಿಸಿ ಭಾರತಕ್ಕೆ ಅರ್ಹ ಗೆಲುವನ್ನು ಗಳಿಸಿಕೊಟ್ಟರು.

ADVERTISEMENT

ಜಪಾನ್ ಪರ ಸೆರೆನ್‌ ತನಾಕ 51ನೇ ನಿಮಿಷ ಗೋಲು ಗಳಿಸಿದರು.

ಹರ್ಮನ್‌ಪ್ರೀತ್ ಈ ಟೂರ್ನಿಯಲ್ಲಿ 13 ಗೋಲುಗಳೊಡನೆ ಭಾರತದ ಪರ ಅತ್ಯಧಿಕ ಗೋಲುಗಳನ್ನು ಗಳಿಸಿದ ಗೌರವಕ್ಕೆ ಪಾತ್ರರಾದರು. ಇದು ಮನ್‌ದೀಪ್‌ ಸಿಂಗ್ (12) ಅವರಿಗಿಂತ ಒಂದು ಹೆಚ್ಚು.

ಸ್ಪರ್ಧೆಯಲ್ಲಿ ಅಜೇಯ ಸಾಧನೆ ಪ್ರದರ್ಶಿಸಿದ ಭಾರತ ತಂಡವು, ಜಪಾನ್ ವಿರುದ್ಧ ಸುಧಾರಿತ ಆಟವಾಡಿತು. ಗುಂಪು ಹಂತದ ವೇಳೆ ಭಾರತ ಇದೇ ತಂಡದ ಮೇಲೆ 4–2 ಗೋಲುಗಳಿಂದ ಜಯ ಗಳಿಸಿತ್ತು.

ಭಾರತ ಎರಡೂ ಕಡೆಗಳಿಂದ ಪರಿಣಾಮಕಾರಿ ದಾಳಿ ನಡೆಸಿತು. ಲಾಂಗ್‌ ಪಾಸ್‌ಗಳನ್ನು ಪರಿಪೂರ್ಣವಾಗಿ ಬಳಸಿತು. ಹೀಗಾಗಿ ಜಪಾನ್‌ ರಕ್ಷಣಾ ವಿಭಾಗವು ಒತ್ತಡಕ್ಕೆ ಸಿಲುಕಿತು. ಐದನೇ ನಿಮಿಷವೇ ಮೊದಲ ಅವಕಾಶ ದೊರಕಿತ್ತು. ಆದರೆ ಎಡಗಡೆಯಿಂದ ಪಾಸ್‌ ಪಡೆದು ಲಲಿತ್‌ ಉಪಾಧ್ಯಾಯ ನಡೆದ ಗೋಲು ಯತ್ನವನ್ನು ಜಪಾನ್ ಗೋಲ್‌ಕೀಪರ್‌ ತಾಕುಮಿ ಕಿಟಗಾವಾ ತಡೆದರು. ಮೊದಲ ಪೆನಾಲ್ಟಿ ಕಾರ್ನರ್‌ನಲ್ಲೂ ಹರ್ಮನ್‌ಪ್ರೀತ್ ಯತ್ನವನ್ನು ಕಿಟಗಾವಾ ಅವರು ಅಡ್ಡಕ್ಕೆ ಜಿಗಿದು ಉತ್ತಮವಾಗಿ ರಕ್ಷಿಸಿದರು.

25ನೇ ನಿಮಿಷ ಕೊನೆಗೂ ಭಾರತ ಗೋಲುಖಾತೆ ತೆರೆಯಿತು. ಗೋಲಿನ ಸಮೀಪದಿಂದ ಅಭಿಷೇಕ್ ಅವರ ಯತ್ನವನ್ನು ಗೋಲ್‌ಕೀಪರ್ ತಡೆದಾಗ ಮರಳಿ ಬಂದ ಚೆಂಡನ್ನು ಮನ್‌ಪ್ರೀತ್ ಪ್ರಬಲ ರಿವರ್ಸ್‌ ಹಿಟ್‌ ಮೂಲಕ ಗುರಿತಲುಪಿಸಿದರು. ವಿರಾಮಕ್ಕೆ ಎರಡು ನಿಮಿಷಗಳಿರುವಾಗ ಜಪಾನ್‌ ನಡೆಸಿದ ಗೋಲು ಯತ್ನವನ್ನು ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್‌ ಅತ್ಯುತ್ತಮವಾಗಿ ತಡೆದರು.

ವಿರಾಮದ ನಂತರ ಎರಡು ನಿಮಿಷಗಳಲ್ಲೇ ಭಾರತ ಬೆನ್ನುಬೆನ್ನಿಗೆ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆಯಿತು. ಮೂರನೇ ಅವಕಾಶದಲ್ಲಿ ಹರ್ಮನ್‌ಪ್ರೀತ್ ತಪ್ಪು ಮಾಡಲಿಲ್ಲ;  ಡ್ರ್ಯಾಗ್‌ಫ್ಲಿಕ್‌ ಮೂಲಕ ಗೋಲು ಗಳಿಸಿದರು. ಕಿಟಗಾವಾ ಕಾಲು ಚಾಚಿದರೂ ಚೆಂಡನ್ನು ತಡೆಯಲಾಗಲಿಲ್ಲ. ಕೆಲವೇ ನಿಮಿಷಗಳ ನಂತರ ಅಮಿತ್ ರೋಹಿದಾಸ್ ಅಂತರ ಹೆಚ್ಚಿಸಿದರು.

ಭಾರತ ಈ ಅವಧಿಯಲ್ಲಿ ಇನ್ನಷ್ಟು ಹಿಡಿತ ಸಾಧಿಸಿತು. ಕೆಲವು ಅವಕಾಶಗಳು ತಪ್ಪಿದ ನಂತರ, ಉಪನಾಯಕ ಹಾರ್ದಿಕ್‌ ಸಿಂಗ್‌ ಪಾಸ್‌ನಲ್ಲಿ ಅಭಿಷೇಕ್ ಗೋಲಿನ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು.

ಪ್ರತಿದಾಳಿಯಲ್ಲಿ ಜಪಾನ್‌ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು. ಈ ಅವಕಾಶದಲ್ಲಿ ತನಾಕ ಅವರು ಜಪಾನ್‌ ಹಿನ್ನಡೆಯನ್ನು ತಗ್ಗಿಸಿದರು.

ಆದರೆ ಅಂತಿಮ ಸೀಟಿಗೆ ಕೆಲವೇ ಕ್ಷಣಗಳಿರುವಾಗ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್‌ ಮೂಲಕ  ಭಾರತಕ್ಕೆ ಮತ್ತೊಂದು ಗೋಲನ್ನು ಗಳಿಸಿದರು.

‘ಸಿದ್ಧತೆಗೆ ಸಾಕಷ್ಟು ಸಮಯ’:

‘ಮಹತ್ವದ ವಿಷಯವೆಂದರೆ ನಮಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ವರ್ಷದ ಅವಧಿ ಸಿಗಲಿದೆ. ಎರಡನೆಯದಾಗಿ ಇದು ನಮಗೆ ಎಚ್ಚರಿಕೆಯ ಗಂಟೆಯಾಗಿತ್ತು. ಮೊದಲು ಏಷ್ಯನ್ ಚಾಂಪಿಯನ್‌ಷಿಪ್‌, ಈಗ ಏಷ್ಯನ್‌ ಗೇಮ್ಸ್‌ನಲ್ಲಿ ಯಶಸ್ಸು ಗಳಿಸಿದ್ದೇವೆ’ ಎಂದು ಗೋಲ್ ಕೀಪರ್ ಪಿ.ಆರ್‌.ಶ್ರೀಜೇಶ್ ಹೇಳಿದರು.

ಮುಂಬರುವ ಪ್ರೊ ಲೀಗ್‌ ಋತುವಿನಲ್ಲಿ ತಂಡವು, ಒಲಿಂಪಿಕ್ಸ್‌ಗೆ ತನ್ನ ಸಿದ್ಧತೆಯನ್ನು ಪರೀಕ್ಷೆಗೆ ಒಳಪಡಿಸಲಿದೆ ಎಂದು ತಂಡದ ಮುಖ್ಯ ಕೋಚ್‌ ಕ್ರೇಗ್ ಫುಲ್ಟನ್ ಹೇಳಿದರು

ಕೊರಿಯಾಕ್ಕೆ ಕಂಚು:

ದಕ್ಷಿಣ ಕೊರಿಯಾ, ಆತಿಥೇಯ ಚೀನಾ ತಂಡದ ಪ್ರಬಲ ಹೋರಾಟವನ್ನು 2–1 ಗೋಲುಗಳಿಂದ ಬದಿಗೊತ್ತಿ ಕಂಚಿನ ಪದಕ ಪಡೆಯಿತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.