ADVERTISEMENT

ಪ್ರಶಸ್ತಿಗಾಗಿ ಹನುಮಾನ್ ಬ್ಲೆಸಿಂಗ್‌, ಆರ್ಟಿಲರಿ ಸೆಣಸಾಟ

ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿ: ಸಡನ್‌ ಡೆತ್‌ನಲ್ಲಿ ಕೊನೆಗೊಂಡ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2022, 14:40 IST
Last Updated 9 ಮೇ 2022, 14:40 IST
ನೈರುತ್ಯ ರೈಲ್ವೆ ತಂಡದ ಆಟಗಾರನ ಮುನ್ನಡೆಯನ್ನು ತಡೆಯಲು ಹನುಮಾನ್ ಬ್ಲೆಸಿಂಗ್ ತಂಡದ ಆಟಗಾರ ಪ್ರಯತ್ನಿಸಿದರು
ನೈರುತ್ಯ ರೈಲ್ವೆ ತಂಡದ ಆಟಗಾರನ ಮುನ್ನಡೆಯನ್ನು ತಡೆಯಲು ಹನುಮಾನ್ ಬ್ಲೆಸಿಂಗ್ ತಂಡದ ಆಟಗಾರ ಪ್ರಯತ್ನಿಸಿದರು   

ಹುಬ್ಬಳ್ಳಿ: ರೋಚಕ ಅಂತ್ಯ ಕಂಡ ಸೆಮಿಫೈನಲ್‌ ಪಂದ್ಯಗಳಲ್ಲಿ ಸಡನ್‌ ಡೆತ್‌ ಮೂಲಕ ಜಯ ಸಾಧಿಸಿದ ಗದಗ ಹನುಮಾನ್ ಬ್ಲೆಸಿಂಗ್ ಮತ್ತು ಹೈದರಾಬಾದ್‌ನ ಆರ್ಟಿಲರಿ ಸೆಂಟರ್ ತಂಡಗಳು ಯಂಗ್‌ ಸ್ಟಾರ್ ಸ್ಪೋರ್ಟ್ಸ್ ಕ್ಲಬ್‌ ಆಯೋಜಿಸಿರುವ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದವು.

ಸೆಟ್ಲ್‌ಮೆಂಟ್ ಅಂಗಣದಲ್ಲಿ ಸೋಮವಾರ ನಡೆದ ಎರಡೂ ಪಂದ್ಯಗಳು ಶೂಟೌಟ್‌ ಮತ್ತು ಸಡನ್ ಡೆತ್‌ನಲ್ಲಿ ಕೊನೆಗೊಂಡವು. ಮೊದಲ ಪಂದ್ಯದಲ್ಲಿ ಹನುಮಾನ್ ಬ್ಲೆಸಿಂಗ್ ತಂಡ ನೈರುತ್ಯ ರೈಲ್ವೆಯನ್ನು ಮಣಿಸಿತು. ಮತ್ತೊಂದು ಹಣಾಹಣಿಯಲ್ಲಿ ಆರ್ಟಿಲರಿ, ಕೊಲ್ಹಾಪುರ ಪೊಲೀಸ್ ವಿರುದ್ಧ ಜಯ ಗಳಿಸಿತು.

ಹನುಮಾನ್ ಬ್ಲೆಸಿಂಗ್ ಮತ್ತು ನೈರುತ್ಯ ರೈಲ್ವೆ ತಂಡಗಳ ನಡುವಿನ ಪಂದ್ಯದ ನಿಗದಿತ ಅವಧಿಯಲ್ಲಿ ಗೋಲು ದಾಖಲಾಗಲಿಲ್ಲ. ಪೆನಾಲ್ಟಿ ಶೂಟೌಟ್‌ನಲ್ಲಿ ಎರಡೂ ತಂಡಗಳು ತಲಾ ಎರಡು ಗೋಲು ಗಳಿಸಿದವು. ಸಡನ್ ಡೆತ್‌ನಲ್ಲಿ ಹರೀಶ್ ಮುತಗಾರ ಅವರು ಹನುಮಾನ್ ಬ್ಲೆಸಿಂಗ್‌ಗೆ ಯಶಸ್ಸು ತಂದುಕೊಟ್ಟರು.

ADVERTISEMENT

ಎರಡನೇ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು. ಪೆನಾಲ್ಟಿ ಶೂಟೌಟ್ ಮುಕ್ತಾಯಕ್ಕೆ ಸ್ಕೋರು 4–4ರಲ್ಲಿ ಸಮ ಆಯಿತು. ಸಡನ್ ಡೆತ್‌ನಲ್ಲಿ ಹೈದರಾಬಾದ್ ತಂಡ ಮೇಲುಗೈ ಸಾಧಿಸಿತು. ಫೈನಲ್ ಪಂದ್ಯ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ರೆಫರಿ ಮೇಲೆ ‘ಪೊಲೀಸರ’ ಹಲ್ಲೆ

ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಕೊಲ್ಹಾಪುರ ಪೊಲೀಸ್ ತಂಡದವರು ರೆಫರಿ ಶ್ರೇಯಸ್‌ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ. ನಿಗದಿತ ಅವಧಿಯ ಕೊನೆಯ ನಿಮಿಷದಲ್ಲಿ ಹೈದರಾಬಾದ್ ತಂಡಕ್ಕೆ ರೆಫರಿ, ಪೆನಾಲ್ಟಿ ಕಾರ್ನರ್ ನೀಡಿದ್ದರು. ಇದನ್ನು ಪ್ರಶ್ನಿಸಿದ ಕೊಲ್ಹಾಪುರ ತಂಡದ ಆಟಗಾರರು ಹಲ್ಲೆ ಮಾಡಿದ್ದಾರೆ. ಮೂರನೇ ಸ್ಥಾನಕ್ಕಾಗಿ ನೈರುತ್ಯ ರೈಲ್ವೆ ಮತ್ತು ಕೊಲ್ಹಾಪುರ ತಂಡಗಳು ಮುಖಾಮುಖಿಯಾಗಬೇಕಾಗಿತ್ತು. ಆದರೆ ಪಂದ್ಯ ರದ್ದುಪಡಿಸಿ ರೈಲ್ವೆ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

‘ಕೊಲ್ಹಾಪುರ ತಂಡದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಕಿ ಕರ್ನಾಟಕದ ಮೂಲಕ ಹಾಕಿ ಇಂಡಿಯಾಗೆ ಮನವಿ ಮಾಡಲಾಗುವುದು. ಹಾಕಿ ಇಂಡಿಯಾಗೆ ದೂರು ನೀಡುವುದಾಗಿ ರೆಫರಿಯೂ ತಿಳಿಸಿದ್ದಾರೆ’ ಎಂದು ಯಂಗ್‌ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಕಾರ್ಯದರ್ಶಿ ಚಂದ್ರಶೇಖರ ಗೋಕಾಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.