ADVERTISEMENT

ಆನ್‌ಲೈನ್‌ ಚೆಸ್ ಟೂರ್ನಿಯಲ್ಲಿ ಹರಿಕೃಷ್ಣಗೆ ಮಿಶ್ರಫಲ

ಪಿಟಿಐ
Published 18 ಸೆಪ್ಟೆಂಬರ್ 2020, 9:09 IST
Last Updated 18 ಸೆಪ್ಟೆಂಬರ್ 2020, 9:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸೇಂಟ್‌ ಲೂಯಿಸ್‌ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಗುರುವಾರ ಮಿಶ್ರಫಲ ಕಂಡರು.ರ‍್ಯಾಪಿಡ್‌ ವಿಭಾಗದ ಕೊನೆಯ ಮೂರು ಸುತ್ತುಗಳಲ್ಲಿ ಆಡಿದ ಹರಿಕೃಷ್ಣ ಅವರು, ಮೊದಲ ಪಂದ್ಯದಲ್ಲಿ ಅಮೆರಿಕದ ಜೆಫರಿ ಕ್ಸಿಯೊಂಗ್‌ ಎದುರು ಗೆದ್ದರು. ಬಳಿಕ ಮತ್ತೊಬ್ಬ ಅಮೆರಿಕ ಪಟು ಹಿಕಾರು ನಕಮುರಾ ಎದುರು ಡ್ರಾ ಸಾಧಿಸಿದರು. ಕೊನೆಯ ಸುತ್ತಿನಲ್ಲಿ ಅಮೆರಿಕದವರೇ ಆದ ವೆಸ್ಲೆ ಸೋ ಅವರ ವಿರುದ್ಧ ಹರಿಕೃಷ್ಣ ಪರಾಭವಗೊಂಡರು.

ಸದ್ಯ ಹರಿಕೃಷ್ಣ ಅವರು ಟೂರ್ನಿಯಲ್ಲಿ ಐದನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಟೂರ್ನಿಯ ಮೊದಲ ದಿನಹರಿಕೃಷ್ಣ, ಎರಡು ಸುತ್ತುಗಳಲ್ಲಿ ಗೆಲ್ಲುವುದರೊಂದಿಗೆ ಶುಭಾರಂಭ ಮಾಡಿದ್ದರು. ಇನ್ನುಳಿದ ಆರು ಪಂದ್ಯಗಳ ಪೈಕಿ ಅವರು ಕೇವಲ ಒಂದರಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾದರು.

ADVERTISEMENT

ಹರಿಕೃಷ್ಣ ಎದುರಿನ ಗೆಲುವಿನೊಂದಿಗೆ ವೆಸ್ಲೆ ಅವರು ಒಟ್ಟು 13 ಪಾಯಿಂಟ್ಸ್‌ ಗಳಿಸಿ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇನ್ನು ಬ್ಲಿಟ್ಜ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಮತ್ತೊಂದು ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಅಲೆಕ್ಸಾಂಡರ್‌ ಗ್ರಿಶ್ಚುಕ್ ಎದುರು 46 ನಡೆಗಳಲ್ಲಿ ಮಣಿದರು.

12 ಪಾಯಿಂಟ್ಸ್‌ ಗಳಿಸಿರುವ ಕಾರ್ಲ್‌ಸನ್‌ ಅವರು ಟೂರ್ನಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ತಲಾ 10 ಪಾಯಿಂಟ್ಸ್ ಕಲೆಹಾಕಿರುವ ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಜಿ ಹಾಗೂ ಅಲೆಕ್ಸಾಂಡರ್‌ ಗ್ರಿಶ್ಚುಕ್‌ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.