ADVERTISEMENT

ಹರ್ಮನ್‌ ಡಬಲ್ ಸ್ಟ್ರೈಕ್: ಭಾರತಕ್ಕೆ ಮಣಿದ ಪಾಕ್

ಪಿಟಿಐ
Published 17 ಡಿಸೆಂಬರ್ 2021, 15:46 IST
Last Updated 17 ಡಿಸೆಂಬರ್ 2021, 15:46 IST
ಗೋಲು ಗಳಿಸಿದ ಭಾರತದ ಆಟಗಾರರ ಸಂಭ್ರಮ  –ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಭಾರತದ ಆಟಗಾರರ ಸಂಭ್ರಮ  –ಎಎಫ್‌ಪಿ ಚಿತ್ರ   

ಢಾಕಾ: ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ ತಂಡವು ಏಷ್ಯಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಜಯಭೇರಿ ಬಾರಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಪಾರಮ್ಯ ಮೆರೆದ ಭಾರತ ತಂಡವು 3–1 ಗೋಲುಗಳಿಂದ ಪಾಕ್ ತಂಡವನ್ನು ಹಣಿಯಿತು. ಹರ್ಮನ್‌ಪ್ರೀತ್ (8ನೇ ನಿ ಮತ್ತು 53ನೇ ನಿ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸಿದ್ದು ತಂಡದ ಜಯದಲ್ಲಿ ಪ್ರಮುಖ ಕಾರಣವಾದವು. ಆಕಾಶದೀಪ್ ಸಿಂಗ್ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಾಕ್ ತಂಡದ ಏಕೈಕ ಗೋಲನ್ನು ಜುನೈದ್ ಮಂಜೂರ್ 45ನೇ ನಿಮಿಷದಲ್ಲಿ ಗಳಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ಮಾಡಿದ್ದ ಭಾರತ ತಂಡವು ಈ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಜಯಿಸಿ ಸೆಮಿಫೈನಲ್ ಪ್ರವೇಶದತ್ತ ದಾಪುಗಾಲಿಟ್ಟಿದೆ. ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ವಿರುದ್ಧ ಭಾರಿ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಿ ಕೊರಿಯಾ ಎದುರು ಡ್ರಾ ಮಾಡಿಕೊಂಡಿತ್ತು.

ADVERTISEMENT

ಆದರೆ ಪಾಕ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಜಪಾನ್ ಎದುರು ಡ್ರಾ ಮಾಡಿಕೊಂಡಿತ್ತು. ಭಾರತ ತಂಡವು ಏಳು ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತವು ಜಪಾನ್ ಎದುರು ಸೆಣಸಲಿದೆ.

ಹೋದ ಸಲ ಮಸ್ಕತ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಭಾರತ ಮತ್ತು ಪಾಕ್ ಪ್ರಶಸ್ತಿ ಹಂಚಿಕೊಂಡಿದ್ದವು.

ಈ ಪಂದ್ಯದಲ್ಲಿ ಭಾರತ ತಂಡವು ಎಂಟನೇ ನಿಮಿಷದಲ್ಲಿಯೇ ಪಾಕ್ ರಕ್ಷಣಾ ಗೋಡೆಯನ್ನು ದಾಟುವಲ್ಲಿ ಭಾರತದ ಸ್ಟ್ರೈಕರ್ ಹರ್ಮನ್‌ಪ್ರೀತ್ ಯಶಸ್ವಿಯಾದರು. ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಕೆಳಮಟ್ಟದ ಫ್ಲಿಕ್ ಮೂಲಕ ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಪಂದ್ಯದಎರಡೂ ಕ್ವಾರ್ಟರ್‌ಗಳಲ್ಲಿ ಭಾರತದ ಆಟಗಾರರೇ ಚೆಂಡಿನ ಮೇಲೆ ಹೆಚ್ಚು ಸಮಯ ನಿಯಂತ್ರಣ ಸಾಧಿಸಿದ್ದರು. ಅದರಲ್ಲೂ ಹರ್ಮನ್‌ಪ್ರೀತ್ ಪದೇ ಪದೇ ನಡೆಸಿದ ದಾಳಿಯನ್ನು ತಡೆಯುವಲ್ಲಿ ಪಾಕ್ ರಕ್ಷಣಾ ಪಡೆಯು ಬಹಳಷ್ಟು ಬೆವರು ಹರಿಸಿತು. ಅದರಲ್ಲೂ ಪಾಕ್ ತಂಡದ ಗೋಲ್‌ ಕೀಪರ್ ಮಝರ್ ಅಬ್ಬಾಸ್ ಅವರ ಆಟ ಅಮೋಘವಾಗಿತ್ತು. ಅರ್ಧವಿರಾಮಕ್ಕೆ ಭಾರತವು 1–0ಯಿಂದ ಮುಂದಿತ್ತು.

42ನೇ ನಿಮಿಷದಲ್ಲಿ ಆಕಾಶದೀಪ್ ಲೆಫ್ಟ್‌ ಫ್ಲ್ಯಾಂಕ್‌ನಿಂದ ಸುಮಿತ್ ಡ್ರೈವ್ ಮಾಡಿದ ಚೆಂಡನ್ನು ರಿವರ್ಸ್ ಹಿಟ್ ಮಾಡುವ ಮೂಲಕ ಗೋಲು ಪೆಟ್ಟಿಗೆ ಸೇರಿಸಿದರು. ಇದರಿಂದಾಗಿ ಗೋಲು ಅಂತರ ಹೆಚ್ಚಾಯಿತು. ಮೂರು ನಿಮಿಷಗಳ ನಂತರ ಪಾಕ್ ಕೂಡ ತಿರುಗೇಟು ನೀಡಿತು. ಇದರ ನಂತರ ಭಾರತದ ರಕ್ಷಣಾ ಪಡೆ ಮತ್ತಷ್ಟು ಚುರುಕಾಯಿತು. ಅದರಿಂದಾಗಿ ಪಾಕ್ ಬಳಗವು ಗೋಲು ಗಳಿಸಲು ಪರದಾಡಿತು. ಈ ಒತ್ತಡವನ್ನು ಸಮರ್ಥವಾಗಿ ಬಳಸಿಕೊಂಡ ಹರ್ಮನ್‌ಪ್ರೀತ್ ಮತ್ತೊಂದು ಪೆನಾಲ್ಟಿಯಲ್ಲಿ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.