ADVERTISEMENT

ಹಾಕಿ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ ಅಗತ್ಯ: ಅಭಿಷೇಕ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 13:09 IST
Last Updated 12 ಆಗಸ್ಟ್ 2022, 13:09 IST
ಭಾರತ ಹಾಕಿ ತಂಡದ ಆಟಗಾರ ಅಭಿಷೇಕ್
ಭಾರತ ಹಾಕಿ ತಂಡದ ಆಟಗಾರ ಅಭಿಷೇಕ್   

ನವದೆಹಲಿ: ’ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ ಹಾಕಿ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ಈಗಿನಿಂದಲೇ ತಯಾರಿ ನಡೆಸುವುದು ಅಗತ್ಯ‘ ಎಂದು ಯುವ ಆಟಗಾರ ಅಭಿಷೇಕ್‌ ಅಭಿಪ್ರಾಯಪಟ್ಟಿದ್ದಾರೆ.

‘ನಾವೆಲ್ಲರೂ ಶೀಘ್ರದಲ್ಲೇ ತರಬೇತಿಗೆ ಮರಳುವುದನ್ನೇ ಎದುರು ನೋಡುತ್ತಿದ್ದೇವೆ. ಮುಂದೆ ಬರಲಿರುವ ಟೂರ್ನಿಗಳಿಗೆ ಸಿದ್ದರಾಗಬೇಕಿದೆ’ ಎಂದು ಹಾಕಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

‘ಒಂದು ತಂಡವಾಗಿ ಇನ್ನಷ್ಟು ಸುಧಾರಣೆ ಬಯಸುತ್ತಿದ್ದೇವೆ. ಮುಂದಿನ ವರ್ಷ ವಿಶ್ವಕಪ್‌ ನಡೆಯಲಿರುವ ಕಾರಣ, ಎಲ್ಲ ಆಟಗಾರರು ಉತ್ತಮ ಫಾರ್ಮ್‌ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ’ ಎಂದರು.

ADVERTISEMENT

22 ವರ್ಷದ ಫಾರ್ವರ್ಡ್‌ ಆಟಗಾರ ಅಭಿಷೇಕ್‌ ಅವರು ಇತ್ತೀಚೆಗೆ ನಡೆದ ಕಾಮ್‌ವೆಲ್ತ್‌ ಕೂಟದಲ್ಲಿ ಭಾರತದ ಎಲ್ಲ ಆರೂ ಪಂದ್ಯಗಳಲ್ಲಿ ಆಡಿದ್ದರಲ್ಲದೆ, ಎರಡು ಗೋಲುಗಳನ್ನು ಗಳಿಸಿದ್ದರು. ಕಾಮನ್‌ವೆಲ್ತ್‌ ಕೂಟದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿದ್ದ ಭಾರತ, ಬೆಳ್ಳಿ ಪದಕ ಪಡೆದುಕೊಂಡಿತ್ತು.

‘ಕಾಮನ್‌ವೆಲ್ತ್‌ನಂತಹ ದೊಡ್ಡ ಕೂಟದಲ್ಲಿ ಆಡಲು ಅವಕಾಶ ಲಭಿಸಿದ್ದು, ಸ್ಮರಣೀಯ ಅನುಭವ ನೀಡಿದೆ. ನನ್ನ ಆಟದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತಲ್ಲದೆ, ಎಲ್ಲೆಲ್ಲಿ ಸುಧಾರಣೆಗೆ ಅವಕಾಶವಿದೆ ಎಂಬುದನ್ನೂ ಮನಗಂಡಿದ್ದೇನೆ’ ಎಂದು ನುಡಿದರು.

‘ಕಾಮನ್‌ವೆಲ್ತ್‌ ಕೂಟದುದ್ದಕ್ಕೂ ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಪ್ರತಿಯೊಂದು ಪಂದ್ಯವೂ ನಮಗೆ ಹೊಸ ಸವಾಲು ಆಗಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲು ಆಗಲಿಲ್ಲ. ಆದರೂ ಆ ಪಂದ್ಯದಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ’ ಎಂದು ಹೇಳಿದರು.

ಹರಿಯಾಣದ ಅಭಿಷೇಕ್‌ ಅವರು ಕಳೆದ ವರ್ಷ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ಪದಾರ್ಪಣೆ ಮಾಡಿದ್ದರು. ಆ ಬಳಿಕ 14 ಪಂದ್ಯಗಳನ್ನು ಆಡಿದ್ದು, ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆಯಲಿರುವ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ ಟೂರ್ನಿಗೆ ಸಜ್ಜಾಗಲು ಭಾರತ ತಂಡದ ತರಬೇತಿ ಶಿಬಿರ ಬೆಂಗಳೂರಿನಲ್ಲಿ ಆ.29 ರಂದು ಆರಂಭವಾಗಲಿದೆ. ಆರಂಭಿಕ ಪಂದ್ಯಗಳಲ್ಲಿ ಭಾರತ, ತವರು ನೆಲದಲ್ಲಿ ನ್ಯೂಜಿಲೆಂಡ್‌ ಮತ್ತು ಸ್ಪೇನ್‌ ತಂಡಗಳನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.