ADVERTISEMENT

ಏಷ್ಯಾಕಪ್‌ ಹಾಕಿ: ಭಾರತದ ಫೈನಲ್ ಕನಸು ಭಗ್ನ

ಪ್ರಶಸ್ತಿ ಸುತ್ತಿಗೆ ದಕ್ಷಿಣ ಕೊರಿಯಾ– ಮಲೇಷ್ಯಾ

ಪಿಟಿಐ
Published 31 ಮೇ 2022, 14:53 IST
Last Updated 31 ಮೇ 2022, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಭಾರತ ಹಾಕಿ ತಂಡದ ಕನಸು ನನಸಾಗಲಿಲ್ಲ.

ಹಾಲಿ ಚಾಂಪಿಯನ್‌ ಭಾರತ ತಂಡವು ಮಂಗಳವಾರ, ಸೂಪರ್ 4 ಹಂತದ ಅಂತಿಮ ಹಣಾಹಣಿಯಲ್ಲಿ 4–4ರಿಂದ ದಕ್ಷಿಣ ಕೊರಿಯಾ ತಂಡದೊಂದಿಗೆ ಡ್ರಾ ಸಾಧಿಸಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡವು 5–0ಯಿಂದ ಜಪಾನ್‌ಗೆ ಸೋಲುಣಿಸಿತು. ಇದರಿಂದಾಗಿ ಭಾರತ ತಂಡಕ್ಕೆ ಕೊರಿಯಾ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ADVERTISEMENT

ಮಲೇಷ್ಯಾ, ಭಾರತ ಮತ್ತು ದಕ್ಷಿಣ ಕೊರಿಯಾ ತಲಾ ಐದು ಪಾಯಿಂಟ್ಸ್ ಗಳಿಸಿದವು. ಆದರೆ ಗೋಲು ಗಳಿಕೆಯಲ್ಲಿ ಭಾರತ ಹಿಂದೆ ಬಿದ್ದಿತು. ಮಲೇಷ್ಯಾ ಮತ್ತು ಕೊರಿಯಾ ಪ್ರಶಸ್ತಿ ಸುತ್ತು ತಲುಪಿದವು.

ಬೀರೇಂದ್ರ ಲಾಕ್ರಾ ಮುಂದಾಳತ್ವದ ಭಾರತ ಈ ಪಂದ್ಯದಲ್ಲಿ ಚುರುಕಿನ ಆಟದ ಮೂಲಕ ‌ಗಮನಸೆಳೆಯಿತು. ಆದರೆ ಗೆಲುವು ಒಲಿಯಲಿಲ್ಲ.

ಭಾರತ ತಂಡದ ಪರ ನೀಲಂ ಸಂಜೀಪ್ ಕ್ಸೆಸ್‌ (9ನೇ ನಿಮಿಷ), ದಿಪ್ಸನ್ ಟಿರ್ಕಿ (21ನೇ ನಿ.), ಮಹೇಶ್ ಶೇಷೇಗೌಡ (22ನೇ ನಿ.) ಮತ್ತು ಶಕ್ತಿವೇಲ್ ಮರೀಶ್ವರನ್‌ (37ನೇ ನಿ.) ಕೈಚಳಕ ತೋರಿದರು.

ದಕ್ಷಿಣ ಕೊರಿಯಾ ತಂಡಕ್ಕಾಗಿ ಜಾಂಗ್‌ ಜಾಂಗ್‌ಯೂನ್‌ (13ನೇ ನಿ.), ಜೀ ವೂ ಚಿಯೊನ್‌ (18ನೇ ನಿ.), ಕಿಮ್ ಜಾಂಗ್ ಹೂ (28ನೇ ನಿ.) ಮತ್ತು ಜುಂಗ್ ಮಂಜೆ (44ನೇ ನಿ. ) ಗೋಲು ಹೊಡೆದರು.

ಬುಧವಾರ ನಡೆಯುವ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಜಪಾನ್ ತಂಡವನ್ನು ಎದುರಿಸಲಿದೆ.

ಇಂದಿನ ಪಂದ್ಯಗಳು

ಮೂರನೇ ಸ್ಥಾನಕ್ಕೆ

ಭಾರತ–ಜಪಾನ್

ಪಂದ್ಯ ಆರಂಭ: ಮಧ್ಯಾಹ್ನ 2.30

ಫೈನಲ್‌

ಮಲೇಷ್ಯಾ– ದಕ್ಷಿಣ ಕೊರಿಯಾ

ಪಂದ್ಯ ಆರಂಭ: ಸಂಜೆ 5 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.