ADVERTISEMENT

ಬಯಾಥ್ಲಾನ್‌: ಚಿನ್ನ ಗೆದ್ದ ಡೆನಿಸ್ ಹರ್ಮನ್‌

ಚಳಿಗಾಲದ ಒಲಿಂಪಿಕ್ಸ್‌: ಆರನೇ ಚಿನ್ನದ ಪದಕ ಗೆದ್ದುಕೊಂಡ ಐರಿನ್ ವೂಸ್ಟ್‌

ರಾಯಿಟರ್ಸ್
Published 7 ಫೆಬ್ರುವರಿ 2022, 12:41 IST
Last Updated 7 ಫೆಬ್ರುವರಿ 2022, 12:41 IST
ಮಹಿಳೆಯರ ಬಯಥ್ಲಾನ್‌ನಲ್ಲಿ ಮುನ್ನುಗ್ಗಿದ ಡೆನಿಸ್‌ ಹರ್ಮನ್‌ –ರಾಯಿಟರ್ಸ್‌ ಚಿತ್ರ
ಮಹಿಳೆಯರ ಬಯಥ್ಲಾನ್‌ನಲ್ಲಿ ಮುನ್ನುಗ್ಗಿದ ಡೆನಿಸ್‌ ಹರ್ಮನ್‌ –ರಾಯಿಟರ್ಸ್‌ ಚಿತ್ರ   

ಜಾಂಗ್ಜಿಯಾಕೊ, ಚೀನಾ: ರೋಚಕ ಪೈಪೋಟಿಯಲ್ಲಿ ಪ್ರತಿಸ್ಪರ್ಧಿಗಳನ್ನು ನಿರಾಸೆಗೊಸಿದ ಜರ್ಮನಿಯ ಡೆನಿಸ್‌ ಹರ್ಮನ್‌ ಅವರು ಚಳಿಗಾಲದ ಒಲಿಂಪಿಕ್ಸ್‌ನ ಮಹಿಳೆಯರ ಬಯಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಸೋಮವಾರ ನಡೆದ 15 ಕಿಲೋಮೀಟರ್‌ ಪರ್ಸ್ಯೂಟ್‌ನಲ್ಲಿ ಅವರು ಮೊದಲಿಗರಾದರು. ಫ್ರಾನ್ಸ್‌ನ ಅನಾಯ್ಸ್ ಶೆವಲಿಯರ್‌ ಬೌಶೆಟ್ ಬೆಳ್ಳಿ ಪದಕ ಗೆದ್ದುಕೊಂಡರೆ ನಾರ್ವೆಯ ಮಾರ್ತಿ ಒಲ್‌ಸುಬು ಕಂಚು ಗೆದ್ದುಕೊಂಡರು.

ವಿಪರೀತ ಗಾಳಿಯಿಂದಾಗಿ ಹಿಂದಿನ ಎರಡು ದಿನಗಳಲ್ಲಿ ಕೆಲವು ಸ್ಪರ್ಧೆಗಳಿಗೆ ಅಡ್ಡಿಯಾಗಿತ್ತು. ಸೋಮವಾರ ಬಯಾಥ್ಲಾನ್‌ ಸಂದರ್ಭದಲ್ಲಿ ಗಾಳಿಯ ವೇಗ ಕಡಿಮೆಯಾಗಿತ್ತು. ಹೀಗಾಗಿ ಕ್ರೀಡಾಪಟುಗಳ ಹುಮ್ಮಸ್ಸು ಹೆಚ್ಚಿತ್ತು.

ADVERTISEMENT

ರಾಷ್ಟ್ರೀಯ ಬಯಾಥ್ಲಾನ್ ಕೇಂದ್ರದಲ್ಲಿ ನಡೆದ15 ಕಿಲೋಮೀಟರ್‌ ಪರ್ಸ್ಯೂಟ್‌ನ ಜಿದ್ದಾಜಿದ್ದಿಯ ಸ್ಪರ್ಧೆಯ ಕೊನೆಯ ಕ್ಷಣದ ವರೆಗೆ ಮೂವರೂ ಪರಸ್ಪರ ಮೇಲುಗೈ ಸಾಧಿಸುತ್ತ ಸಾಗಿದರು. ಆದರೆ ಚಿನ್ನದ ಪದಕ ಜರ್ಮನಿ ಅಥ್ಲೀಟ್ ಪಾಲಾಯಿತು.

ಆರಂಭದಲ್ಲಿ ಹರ್ಮನ್‌ ಅವರಿಗೆ ಸ್ವೀಡನ್‌ನ ಯುವ ಅಥ್ಲೀಟ್‌ ಎಲ್ವಿರಾ ಒಯ್ಬರ್ಗ್‌ ಪೈಪೋಟಿ ಒಡ್ಡಿದರು. ಸೋಚಿ ಒಲಿಂಪಿಕ್ಸ್‌ನ 4x5 ಕಿಮೀ ರಿಲೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಹರ್ಮನ್‌ ಇಲ್ಲಿ ಚಿನ್ನ ಗೆಲ್ಲಲು ಪ್ರತಿಕ್ಷಣವೂ ತೀವ್ರ ಪ್ರಯತ್ನ ಮಾಡಿದರು. 44 ನಿಮಿಷ 12.7 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಕೊನೆಯ ಲೆಗ್‌ನಲ್ಲಿ ಮಿಂಚಿದ ಬೌಶೆಟ್‌ 5.9 ಸೆಕೆಂಡುಗಳ ಅಂತರದಲ್ಲಿ ಮೊದಲ ಸ್ಥಾನ ಕಳೆದುಕೊಂಡರು. 2018ರ ಒಲಿಂಪಿಕ್ಸ್‌ನ ಚಾಂಪಿಯನ್ ಹಾಗೂ ಎಲ್ವಿರಾ ಅವರ ಅಕ್ಕ ಹನಾ ಒಯೆಬರ್ಗ್‌ ನಿರಾಶೆಗೆ ಒಳಗಾದರು. ಅವರು ಹರ್ಮನ್‌ ಅವರಿಗಿಂತ ಎರಡೂವರೆ ನಿಮಿಷ ತಡವಾಗಿ ಗುರಿ ತಲುಪಿದರು.

ಸ್ಪೀಡ್ ಸ್ಕೇಟಿಂಗ್ ಪ್ರಶಸ್ತಿ ಉಳಿಸಿಕೊಂಡ ವೂಸ್ಟ್‌

ಸ್ಪೀಡ್‌ ಸ್ಕೇಟಿಂಗ್‌ನ 1500 ಮೀಟರ್ಸ್‌ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್‌ನ ಐರಿನ್ ವೂಸ್ಟ್ 53.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆರನೇ ಚಿನ್ನ ತಮ್ಮದಾಗಿಸಿಕೊಂಡರು. ಕಳೆದ ಬಾರಿ ಕೂಡ ಚಾಂಪಿಯನ್ ಆಗಿದ್ದ ವೂಸ್ಟ್‌ ಸೋಮವಾರ ಒಲಿಂಪಿಕ್ ದಾಖಲೆಯನ್ನೂ ಬರೆದರು.

ಟಕಾಗಿ ಅವರು ಬೆಳ್ಳಿ ಪದಕ ಗೆದ್ದುಕೊಂಡರೆ ಆ್ಯಂಟೊನೀಟ್ ಡಿ ಜಾಂಗ್ ಕಂಚಿನ ಪದಕ ಗಳಿಸಿದರು. 2006ರ ಟ್ಯೂರಿನ್‌ನಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ವೂಸ್ಟ್‌ ಹಿಂದಿನ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಐದು ಚಿನ್ನದ ಪದಕ ಗೆದ್ದುಕೊಂಡಿದ್ದರು.

ಮಾಸ್ಕ್ ಧರಿಸಿ ಕಣಕ್ಕಿಳಿದ ಆಟಗಾರ್ತಿಯರು

ರಷ್ಯಾ ಮತ್ತು ಕೆನಡಾದ ಮಹಿಳಾ ಐಸ್ ಹಾಕಿ‍ಪಟುಗಳು ಮಾಸ್ಕ್ ಧರಿಸಿ ಕಣಕ್ಕೆ ಇಳಿದರು. ಸಮಯಕ್ಕೆ ಸರಿಯಾಗಿ ಕೋವಿಡ್ ಪರೀಕ್ಷೆಯ ವರದಿ ಬಾರದೇ ಇದ್ದುದರಿಂದ ತಂಡಗಳು ಈ ಕ್ರಮಕ್ಕೆ ಮುಂದಾಗಿದ್ದವು.

ಪಂದ್ಯದಲ್ಲಿ ಕೆನಡಾ 6–1ರಲ್ಲಿ ರಷ್ಯಾವನ್ನು ಮಣಿಸಿತು. ಗೊಂದಲಗಳಿಂದಾಗಿ ಪಂದ್ಯ ಒಂದು ತಾಸು ತಡವಾಗಿ ಆರಂಭಗೊಂಡಿತ್ತು. ಕೋವಿಡ್ ಆತಂಕದ ನಡುವೆಯೇ ನಡೆಯುತ್ತಿರುವ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳು ಬಯೊಬಬಲ್‌ನಲ್ಲಿದ್ದಾರೆ. ಪ್ರತಿಯೊಬ್ಬರೂ ಪ್ರತಿ ಸಂದರ್ಭದಲ್ಲೂ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಸ್ಪರ್ಧೆಯ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.