ADVERTISEMENT

ವಿಶ್ವಕಪ್ ಗೆದ್ದರೆ ಆಟಗಾರರಿಗೆ ತಲಾ 25 ಲಕ್ಷ ಬಹುಮಾನ: ಹಾಕಿ ಇಂಡಿಯಾ

ಪಿಟಿಐ
Published 28 ಡಿಸೆಂಬರ್ 2022, 13:14 IST
Last Updated 28 ಡಿಸೆಂಬರ್ 2022, 13:14 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ನವದೆಹಲಿ: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಗೆದ್ದರೆ ತಂಡದ ಆಟಗಾರರಿಗೆ ತಲಾ ₹ 25 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ ₹ 5 ಲಕ್ಷ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ.‌

ಮುಂದಿನ ತಿಂಗಳು 13ರಿಂದ ಒಡಿಶಾದ ಭುವನೇಶ್ವರ–ರೂರ್ಕೆಲಾದಲ್ಲಿ ಟೂರ್ನಿ ನಡೆಯಲಿದೆ. ಟೂರ್ನಿಯ ಮೊದಲ ದಿನ, ಮೊದಲ ಪಂದ್ಯದಲ್ಲಿ ಭಾರತ, ಸ್ಪೇನ್ ತಂಡಕ್ಕೆ ಮುಖಾಮುಖಿಯಾಗಲಿದೆ.

ಬೆಳ್ಳಿ ಪದಕ ಜಯಿಸಿದರೆ ಆಟಗಾರರಿಗೆ ತಲಾ ₹ 15 ಲಕ್ಷ ಮತ್ತು ನೆರವು ಸಿಬ್ಬಂದಿಗೆ ₹ 3 ಲಕ್ಷ; ಕಂಚು ಗೆದ್ದರೆ ₹ 10 ಲಕ್ಷ ಮತ್ತು ₹ 2 ಲಕ್ಷ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ತಿಳಿಸಿದೆ.

ADVERTISEMENT

ಡಿಸೆಂಬರ್ 24ರಂದು ನಡೆದ ಹಾಕಿ ಇಂಡಿಯಾದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಬಹುಮಾನ ಘೋಷಣೆಯು ಆಟಗಾರರನ್ನು ಗೆಲುವಿಗೆ ಇನ್ನಷ್ಟು ಪ್ರೇರೇಪಿಸಲಿದೆ‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ತಿಳಿಸಿದ್ದಾರೆ.

ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ 1975ರ ಆವೃತ್ತಿಯಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿ ಚಿನ್ನದ ಪದಕ ಜಯಿಸಿತ್ತು. 1971ರಲ್ಲಿ ಕಂಚು ಮತ್ತು 1973ರಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.