ADVERTISEMENT

ಹಾಕಿ ತಂಡಗಳ ಸ್ಥಳಾಂತರ ಇಲ್ಲ

ಪಿಟಿಐ
Published 21 ಮೇ 2020, 6:03 IST
Last Updated 21 ಮೇ 2020, 6:03 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗಾಗಿ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲಿರುವ ಹಾಕಿ ತಂಡಗಳನ್ನು ಸ್ಥಳಾಂತರಗೊಳಿಸುವುದಿಲ್ಲ ಎಂದು ಹಾಕಿ ಇಂಡಿಯಾ ಬುಧವಾರ ಸ್ಪಷ್ಟಪಡಿಸಿದೆ.

ಸಾಯ್‌ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಬಾಣಸಿಗನೊಬ್ಬ ಕೋವಿಡ್‌–19ನಿಂದ ಮೃತಪಟ್ಟ ಬಳಿಕ, ಆಟಗಾರರ ಸ್ಥಳಾಂತರದ ಕುರಿತು ಪ್ರಶ್ನೆ ಉದ್ಭವಿಸಿತ್ತು.

‘ಬಾಣಸಿಗ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದ. ಬಳಿಕ ಆತನಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಭಯಪಡುವ ಅಗತ್ಯವಿಲ್ಲ. ಆಟಗಾರರು ತಂಗಿದ್ದ ಸ್ಥಳಕ್ಕೆ ಆತ ಹೋಗಿಲ್ಲ’ ಎಂದು ಸಾಯ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ತಂಡಗಳನ್ನು ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ದೇಶದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ. ಒಂದೊಮ್ಮೆ ಸ್ಥಳಾಂತರಕ್ಕೆ ಮನಸ್ಸು ಮಾಡಿದರೂ ಅದು ಪ್ರಾಯೋಗಿಕವಾಗಿ ಅಸಾಧ್ಯ. ಏಕೆಂದರೆ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಇದೆ’ ಎಂದು ಹಾಕಿ ಇಂಡಿಯಾ ಕಾರ್ಯನಿರ್ವಹಣಾಧಿಕಾರಿ ಎಲೆನಾ ನಾರ್ಮನ್‌ ಹೇಳಿದ್ದಾರೆ.

‘ಕೋವಿಡ್‌ನಿಂದ ಸಾವನ್ನಪ್ಪಿರುವ ಬಾಣಸಿಗ, ಮಾರ್ಚ್‌ 10ರಿಂದ ಸಾಯ್‌ ಕೇಂದ್ರದ ಗೇಟ್‌ನಿಂದ ಆಚೆ ತೆರಳಿಲ್ಲ. ಇಲ್ಲಿರುವ 60 ನೌಕರರಲ್ಲಿ ಓರ್ವನಾಗಿದ್ದ ಆತನಿಗೆ ವೃದ್ಧಾಪ್ಯದ ಹಿನ್ನೆಲೆಯಲ್ಲಿ ಮನೆಗೆ ತೆರಳುವಂತೆ ಸೂಚಿಸಲಾಗಿತ್ತು. ಆತನ ಸಂಬಂಧಿಯೊಬ್ಬರು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಕಾರಣ ಅಲ್ಲಿಗೆ ತೆರಳಿದ್ದ ಬಾಣಸಿಗ ಹೃದಯಸ್ತಂಭನದಿಂದ ಮೃತಪಟ್ಟಿದ್ದ. ಶಿಷ್ಟಾಚಾರದ ಪ್ರಕಾರ ಕೊರೊನಾ‌ ತಪಾಸಣೆ ಮಾಡಲಾಗಿತ್ತು. ಆತನಲ್ಲಿ ಸೋಂಕು ದೃಢಪಟ್ಟಿತ್ತು’ ಎಂದು ಸಾಯ್‌ನ ಉನ್ನತ ಅಧಿಕಾರಿ ವಿವರಿಸಿದರು.

‘ಸಾಯ್‌ ಆವರಣವನ್ನು ಮೂರು ಭಾಗಗಳಾಗಿ ಅಂದರೆ ಗೇಟ್‌ ಏರಿಯಾ, ಸೆಕ್ಟರ್‌ ಎ ಮತ್ತು ಸೆಕ್ಟರ್‌ ಬಿ ಎಂದು ವಿಂಗಡಿಸಲಾಗಿದೆ. ಬಿ ಸೆಕ್ಟರ್‌ನಲ್ಲಿ ಆಟಗಾರರಿದ್ದಾರೆ. ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ’ ಎಂದು ಅವರು ನುಡಿದರು.

’ಮುನ್ನೆಚ್ಚರಿಕೆಯ ಕ್ರಮವಾಗಿ ಸೋಂಕಿತನ ಸಂಪರ್ಕಕ್ಕೆ ಬಂದಿರಬಹುದಾದ ಕಾವಲುಗಾರ ಸೇರಿದಂತೆ ಮೂರ್ನಾಲ್ಕು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.