ಟೆಕ್ಸಾಸ್: ಆರ್ಲಿಂಗ್ಟನ್‌ನಲ್ಲಿ ನಡೆದ ‘ಚೆಕ್‌ಮೇಟ್’ ಟೂರ್ನಿಯ ಮೊದಲ ಸುತ್ತಿನಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಅಮೆರಿಕ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ಈ ಗೆಲುವನ್ನು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹಿಕಾರು ನಕಮುರಾ ಸಂಭ್ರಮಿಸಿದ ರೀತಿ ಟೀಕೆಗೆ ಗುರಿಯಾಗಿದೆ.
ಎದುರಾಳಿ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರನ್ನು ಸೋಲಿಸಿದ ನಕಮುರಾ ಅವರು, ತಮ್ಮ ಆಸನದಿಂದ ಎದ್ದು ಗುಕೇಶ್ ಅವರ ‘ಕಿಂಗ್’ ಅನ್ನು ಎಸೆದು ಸಂಭ್ರಮಿಸಿದ್ದಾರೆ. ನಕಮುರಾ ವರ್ತನೆ ಕಂಡು ಗೊಂದಲಕ್ಕೀಡಾದ ಗುಕೇಶ್ ಅವರು ಸುಮ್ಮನೆ ಕುಳಿತಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕ್ರೀಡಾ ಮನೋಭಾವವನ್ನು ಕಾಪಾಡಿಕೊಳ್ಳದ ನಕಮುರಾ ಅವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಮುರಾ ಅವರು ತಮ್ಮ ವರ್ತನೆ ಮೂಲಕ ವಿಶ್ವ ಚಾಂಪಿಯನ್ ಗುಕೇಶ್ ಅವರಿಗೆ ಅಗೌರವ ತೋರಿದ್ದಾರೆ ಎಂದು ಹೇಳಿದ್ದಾರೆ.
ಇನ್ನು, ಫ್ಯಾಬಿಯಾನೊ ಕರುವಾನಾ ಎದುರು ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಯೇರಿಗೇಸಿ, ಕ್ಯಾರಿಸ್ಸಾ ಯಿಪ್ ಎದುರು ದಿವ್ಯಾ ದೇಶ್‌ಮುಖ್, ಲೆವಿ ರೋಜ್‌ಮನ್ ಎದುರು ಸಾಗರ್ ಶಾ ಮತ್ತು ತಾನಿ ಅಡೆವುಮಿ ಎದುರು ಎಥಾನ್ ವಾಜ್ ಸೋಲು ಕಂಡಿದ್ದಾರೆ.
ಪಂದ್ಯದುದ್ದಕ್ಕೂ ಉತ್ತಮ ಹಿಡಿತ ಸಾಧಿಸಿದ್ದ ಅಮೆರಿಕ ತಂಡವು ಭಾರತವನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ. ಕಪ್ಪು ಕಾಯಿಯನ್ನು ಮುನ್ನಡೆಸುತ್ತಿದ್ದ ಭಾರತ ತಂಡ ಒತ್ತಡಕ್ಕೆ ಬಿದ್ದಂತೆ ಕಾಣುತ್ತಿತ್ತು. ಅದಾಗ್ಯೂ ಭಾರತದಲ್ಲಿ ನಡೆಯಲಿರುವ ಚೆಕ್‌ಮೇಟ್‌ನ ಮುಂದಿನ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸುವ ವಿಶ್ವಾಸವನ್ನು ಭಾರತ ಆಟಗಾರರು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.