ಬೆಂಗಳೂರು: ‘ಆಸ್ಟ್ರೇಲಿಯಾ ತಂಡವನ್ನು ಅದರ ತವರಿನಲ್ಲಿ ಎದುರಿಸುವುದರಿಂದ ನಾವು ಆಟದಲ್ಲಿ ಸುಧಾರಿಸಬೇಕಾಗಿರುವುದು ಎಲ್ಲೆಲ್ಲಿ ಎಂಬುದನ್ನು ತಿಳಿದುಕೊಳ್ಳಲು ನೆರವಾಗಲಿದೆ. ಮುಂದಿನ ತಿಂಗಳ ಏಷ್ಯಾ ಕಪ್‌ಗೆ ಸಿದ್ಧತೆಗೂ ನಮಗೆ ಅನುಕೂಲವಾಗಲಿದೆ’ ಎಂದು ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಶುಕ್ರವಾರ ತಿಳಿಸಿದರು.
ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾರತ ತಂಡ ಶುಕ್ರವಾರ ಬೆಳಗಿನ ಜಾವ ಆಸ್ಟ್ರೇಲಿಯಾಕ್ಕೆ ಪಯಣಿಸಿತು. ಪಂದ್ಯಗಳು ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ಆಗಸ್ಟ್ 15, 16, 19 ಮತ್ತು 21ರಂದು ಪಂದ್ಯಗಳು ನಡೆಯಲಿವೆ.
‘ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಎದುರಿಸುವುದು ದೊಡ್ಡ ಸವಾಲು. ಈಗ ಏಷ್ಯಾ ಕಪ್ ಸಿದ್ಧತೆಯ ಹಂತದಲ್ಲಿ ನಮಗೆ ಅಗತ್ಯವಿದ್ದುದೂ ಇಂಥ ಸರಣಿ’ ಎಂದು ತಂಡ ನಿರ್ಗಮಿಸುವ ಮೊದಲು ಭಾರತ ತಂಡದ ನಾಯಕ ತಿಳಿಸಿದರು.
‘ಈ ಸರಣಿಯು ಏಷ್ಯಾ ಕಪ್‌ಗೆ ನಮ್ಮ ಸಿದ್ಧತೆಯ ಪ್ರಮುಖ ಭಾಗವಾಗಿದೆ ಎಂದು ಪರಿಗಣಿಸಿದ್ದೇವೆ. ಪ್ರಬಲ ಎದುರಾಳಿಯ ವಿರುದ್ಧ ತಂಡವಾಗಿ ಸುಧಾರಣೆ ಕಂಡುಕೊಳ್ಳುವುದರತ್ತ ಗಮನ ನೀಡುತ್ತಿದ್ದೇವೆ. ರಾಜಗೀರ್‌ಗೆ ತೆರಳುವ ಮೊದಲು ನಮಗೆ ಬೇಕಿದ್ದ ಮಾನಸಿಕ ಸಿದ್ಧತೆ ಕಂಡುಕೊಳ್ಳಲಿದ್ದೇವೆ’ ಎಂದರು.
ತಂಡದಲ್ಲಿ ಅನುಭವಿ ಆಟಗಾರರ ಜೊತೆ ಉದಯೋನ್ಮುಖ ಆಟಗಾರರ ಹದವಾದ ಮಿಳಿತವಿದೆ. ಏಷ್ಯಾ ಕಪ್‌ಗೆ ತಂಡವನ್ನು ಅಂತಿಮಗೊಳಿಸಲೂ ಈ ಸರಣಿ ನೆರವಾಗಲಿದೆ.
ಏಷ್ಯಾ ಕಪ್ ಟೂರ್ನಿಯು ರಾಜಗೀರ್‌ನಲ್ಲಿ ಆ. 29ರಿಂದ ನಡೆಯಲಿದೆ. ಈ ಟೂರ್ನಿಯ ವಿಜೇತರು ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.