ADVERTISEMENT

ಪಾಕ್‌ಗೆ ಸೋಲುಣಿಸಿದ ನೆದರ್ಲೆಂಡ್ಸ್‌

ಪಿಟಿಐ
Published 9 ಡಿಸೆಂಬರ್ 2018, 20:15 IST
Last Updated 9 ಡಿಸೆಂಬರ್ 2018, 20:15 IST
ನೆದರ್ಲೆಂಡ್ಸ್‌ ಆಟಗಾರರ ಸಂಭ್ರಮ
ನೆದರ್ಲೆಂಡ್ಸ್‌ ಆಟಗಾರರ ಸಂಭ್ರಮ   

ಭುವನೇಶ್ವರ: ಆಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದ ನೆದರ್ಲೆಂಡ್ಸ್‌ ತಂಡ ಹಾಕಿ ವಿಶ್ವಕಪ್‌ನ ಪಂದ್ಯದಲ್ಲಿ ಗೆದ್ದಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ನೆದರ್ಲೆಂಡ್ಸ್‌ 5–1 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತು.

ವಿಶ್ವಕಪ್‌ನಲ್ಲಿ ಈ ಹಿಂದೆ ಉಭಯ ತಂಡಗಳು 10 ಸಲ ಮುಖಾಮುಖಿಯಾಗಿದ್ದವು. ಈ ಪೈಕಿ ಪಾಕ್‌ ಆರರಲ್ಲಿ ಗೆದ್ದಿತ್ತು.

ADVERTISEMENT

ಕ್ವಾರ್ಟರ್‌ ಫೈನಲ್‌ಗೆ ನೇರ ಅರ್ಹತೆ ಗಳಿಸುವ ಗುರಿಯೊಂದಿಗೆ ಅಂಗಳಕ್ಕಿಳಿದಿದ್ದ ನೆದರ್ಲೆಂಡ್ಸ್‌ ಏಳನೇ ನಿಮಿಷದಲ್ಲಿ ಖಾತೆ ತೆರೆಯಿತು. ಥಿಯೆರಿ ಬ್ರಿಂಕ್‌ಮನ್ ಗೋಲು ಗಳಿಸಿದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಪಾಕ್‌ ತಂಡದ ಉಮರ್‌ ಭಟ್‌ ಅವಕಾಶ ನೀಡಲಿಲ್ಲ. ಒಂಬತ್ತನೇ ನಿಮಿಷದಲ್ಲಿ ಲಭಿಸಿದ ‍ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವರು 1–1 ಸಮಬಲಕ್ಕೆ ಕಾರಣರಾದರು.

ನಂತರ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಎರಡನೇ ಕ್ವಾರ್ಟರ್‌ನಲ್ಲಿ ನೆದರ್ಲೆಂಡ್ಸ್‌ ಮೋಡಿ ಮಾಡಿತು. ಈ ತಂಡದ ವ್ಯಾಲೆಂಟಿನ್‌ ವೆರ್ಗಾ 27ನೇ ನಿಮಿಷದಲ್ಲಿ ಗೋಲು ಬಾರಿಸಿ 2–1 ಮುನ್ನಡೆಗೆ ಕಾರಣರಾದರು. 37ನೇ ನಿಮಿಷದಲ್ಲಿ ಬಾಬ್‌ ಡಿ ವೂಗ್ಡ್‌ ಕೈಚಳಕ ತೋರಿದರು. ಹೀಗಾಗಿ ಮುನ್ನಡೆ 3–0ಗೆ ಹೆಚ್ಚಿತು.

ಅಂತಿಮ ಕ್ವಾರ್ಟರ್‌ನಲ್ಲೂ ನೆದರ್ಲೆಂಡ್ಸ್‌ ಆಟಗಾರರು ಅಬ್ಬರಿಸಿದರು. 47ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶದಲ್ಲಿ ಜೋರಿಟ್‌ ಕ್ರೂನ್‌ ಚೆಂಡನ್ನು ಗುರಿ ಸೇರಿಸಿದರು. 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ವ್ಯಾನ್‌ ಡರ್‌ ವೀರ್ಡನ್‌ ಮಿಂಕ್‌ ಗೋಲಾಗಿ ಪರಿವರ್ತಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.