ADVERTISEMENT

Hong Kong Open: ಲಕ್ಷ್ಯ ಸೇನ್‌ಗೆ ಮಣಿದ ಕರ್ನಾಟಕದ ಆಯುಷ್‌ ಶೆಟ್ಟಿ ನಿರ್ಗಮನ

ಪಿಟಿಐ
Published 12 ಸೆಪ್ಟೆಂಬರ್ 2025, 13:36 IST
Last Updated 12 ಸೆಪ್ಟೆಂಬರ್ 2025, 13:36 IST
<div class="paragraphs"><p>ಲಕ್ಷ್ಯ ಸೇನ್‌</p></div>

ಲಕ್ಷ್ಯ ಸೇನ್‌

   

(ಪಿಟಿಐ ಚಿತ್ರ)

ಹಾಂಗ್‌ಕಾಂಗ್‌: ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ಲಕ್ಷ್ಯ ಸೇನ್‌ ಅವರು ಹಾಂಗ್‌ಕಾಂಗ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಯುಷ್‌ ಶೆಟ್ಟಿ ಅವರನ್ನು ಮಣಿಸಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದರು. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿಯೂ ನಾಲ್ಕರ ಘಟ್ಟ ಪ್ರವೇಶಿಸಿತು.

ADVERTISEMENT

ಸೇನ್‌ ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವದೇಶದ ಉದಯೋನ್ಮುಖ ಆಟಗಾರ ಆಯುಷ್‌ ವಿರುದ್ಧ 21–16, 17–21, 21–13 ರಿಂದ ಗೆಲುವು ಸಾಧಿಸಿದರು. ತುರುಸಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಸೇನ್‌ ಅವರು ತಮ್ಮ ಅನುಭವವನ್ನು ಬಳಸಿ ಮೇಲುಗೈ ಸಾಧಿಸಿದರು. 

2023ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತ ಕೊಡೈ ನರವೋಕಾ ಅವರಿಗೆ ಗುರುವಾರ ಆಘಾತ ನೀಡಿದ್ದ ಕನ್ನಡಿಗ ಆಯುಷ್‌ ಅವರು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಜೊತೆಗಾರನಿಗೆ ಮಣಿದರು.

ಲಕ್ಷ್ಯ ಅವರು ನಾಲ್ಕರ ಘಟ್ಟದಲ್ಲಿ ಚೀನಾ ತೈಪೆಯ ಶೌ ಟಿಯನ್‌ ಶೆನ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಸಾತ್ವಿಕ್‌–ಚಿರಾಗ್ ಜೋಡಿ ಮುನ್ನಡೆ:

ಯಶಸ್ಸಿನ ಓಟವನ್ನು ಮುಂದುವರಿಸಿರುವ ಎಂಟನೇ ಶ್ರೇಯಾಂಕದ ಸಾತ್ವಿಕ್‌–ಚಿರಾಗ್ ಜೋಡಿಯು ಡಬಲ್ಸ್‌ ಎಂಟರ ಘಟ್ಟದ ಪಂದ್ಯದಲ್ಲಿ 21–14, 20–22, 21–16 ರಿಂದ ಮಲೇಷ್ಯಾದ ಜುನೈದಿ ಅರಿಫ್‌– ರಾಯ್‌ ಕಿಂಗ್ ಯಾಪ್‌ ಅವರನ್ನು ಮಣಿಸಿತು.

ತಾಳ್ಮೆಯಿಂದಲೇ ಆಟ ಆರಂಭಿಸಿದ ಭಾರತದ ಜೋಡಿ, ಲಯ ಕಂಡುಕೊಂಡ ಮೇಲೆ ಪ್ರಬಲ ಸ್ಮ್ಯಾಶ್‌ಗಳ ಮೂಲಕ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರರು ತಿರುಗೇಟು ನೀಡಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಗೇಮ್‌ಅನ್ನು ಗೆದ್ದು ಸಮಬಲ ಸಾಧಿಸಿದರು.

ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಎದೆಗುಂದದೇ ಆಡಿದ ಭಾರತದ ಆಟಗಾರರು ಪೂರ್ಣ ಮೇಲುಗೈ ಸಾಧಿಸಿದರು. 

ನಾಲ್ಕರ ಘಟ್ಟದಲ್ಲಿ ಈ ಜೋಡಿಯು ಚೀನಾ ತೈಪೆಯ ಶೆನ್‌ ಶೆಂಗ್‌ ಕುವಾನ್‌– ಲಿನ್‌ ಬಿಂಗ್‌ ವೈ ಅವರ ಸವಾಲನ್ನು ಎದುರಿಸದೆ.

ಈ ಟೂರ್ನಿಯು ಸುಮಾರು ₹4 ಕೋಟಿ ಬಹುಮಾನ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.