ಬೆಂಗಳೂರು: ರೇಸ್ ಪ್ರಿಯರು ಕಾತುರದಿಂದ ಕಾಯುತ್ತಿರುವ ಚಳಿಗಾಲದ ರೇಸ್‌ಗಳ ಪ್ರತಿಷ್ಠಿತ ಎಚ್‌ಪಿಎಸ್‌ಎಲ್ ಬೆಂಗಳೂರು ಡರ್ಬಿ ಭಾನುವಾರ ಸಂಜೆ 4:25ಕ್ಕೆ ನಡೆಯಲಿದೆ.
ಹಾರ್ಸ್ ಪವರ್ ಸ್ಪೋರ್ಟ್ಸ್ ಲೀಗ್ (ಎಚ್‌ಪಿಎಸ್‌ಎಲ್) ಸಂಸ್ಥೆಯ ಪ್ರಾಯೋಜಕತ್ವ ಜೊತೆಗೆ ಬೆಂಗಳೂರು ಟರ್ಫ್ ಕ್ಲಬ್ ಜಂಟಿಯಾಗಿ ಏರ್ಪಡಿಸಿರುವ ಡರ್ಬಿಯ ಒಟ್ಟು ಬಹುಮಾನದ ಮೊತ್ತ ₹1.28 ಕೋಟಿ. ಇದರಲ್ಲಿ ಗೆಲ್ಲುವ ಕುದುರೆಯು ತನ್ನ ಮಾಲೀಕನಿಗೆ ಸುಮಾರು ₹2 ಲಕ್ಷ ಮೌಲ್ಯದ ಆಕರ್ಷಕ ಟ್ರೋಫಿಯೊಂದಿಗೆ ₹61.70 ಲಕ್ಷ ನಗದು ಬಹುಮಾನವನ್ನು ದೊರಕಿಸಿಕೊಡಲಿದೆ.
ಡರ್ಬಿಯಲ್ಲಿ ಒಟ್ಟು 9 ಕುದುರೆಗಳು ಸ್ಪರ್ಧಾಕಣಕ್ಕೆ ಇಳಿಯಲಿವೆ. ಅವುಗಳಲ್ಲಿ 6 ಗಂಡು ಮತ್ತು 3 ಹೆಣ್ಣು ಕುದುರೆಗಳು. ಡಾರಿಯಸ್ ಬೈರಾಮ್ಜಿ ತರಬೇತಿಯಲ್ಲಿ ಪಳಗಿರುವ ರಾಂಕ್ವೆಲಿನೊ ಮತ್ತು ಪ್ರಸನ್ನಕುಮಾರ್ ತರಬೇತಿ ನೀಡಿರುವ ರೀಡಿಫೈನ್ಡ್ ಈ ಪ್ರತಿಷ್ಠಿತ ರೇಸ್‌ನ ಪ್ರಮುಖ ಸ್ಫರ್ಧಿಗಳು.
ರಾಂಕ್ವೆಲಿನೊ ತನ್ನ ಹಿಂದಿನ ರೇಸ್‌ಗಳನ್ನು ಗೆದ್ದು, ಗೆಲುವಿನ ಲಯಕ್ಕೆ ಮರಳಿದೆ. ಅದರಲ್ಲೂ 2000 ಗಿನ್ನೀಸ್ ಗೆದ್ದಿರುವ ಈ ಕುದುರೆಯ ವೈಖರಿಯು ಆಕರ್ಷಕವಾಗಿದ್ದು, ಡರ್ಬಿ ರೇಸ್‌ನ ಕೇಂದ್ರಬಿಂದುವಾಗಿದೆ.
ರೀಡಿಫೈನ್ಡ್ ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪುಣೆಯಲ್ಲಿಯೂ ಅಮೋಘ ಓಟ ಪ್ರದರ್ಶಿಸಿದೆ. ಪುಣೆಯ ಡರ್ಬಿ ರೇಸ್‌ನಲ್ಲಿ ಬೆಂಗಳೂರು ಡರ್ಬಿ ಗೆದ್ದಿದ್ದ ಸ್ಯಾಂಟಿಸಿಮೊ ಕುದುರೆಯ ಎದುರು ರೋಚಕ ಜಯಗಳಿಸಿದೆ. ಪುಣೆ ಡರ್ಬಿಯ ಸೋಲಿನ ನಂತರ ಸ್ಯಾಂಟಿಸಿಮೊ ಮುಂಬೈನಲ್ಲಿ 2000 ಗಿನ್ನೀಸ್‌ನಲ್ಲಿ ಗೆಲುವು ಕಂಡಿದೆ. ಈ ಲೆಕ್ಕಚಾರದಲ್ಲಿ ರೀಡಿಫೈನ್ಡ್ ಇಲ್ಲಿನ ಡರ್ಬಿ ಗೆಲ್ಲುವ ಫೇವರಿಟ್ ಎನಿಸಿದೆ.
ಉಳಿದ ಸ್ಥಾನಗಳಿಗಾಗಿ ಮ್ಯಾಂಡರಿನೊ ಮತ್ತು ಎಕ್ಸಲೆಂಟ್ ಲಾಸ್ ನಡುವೆ ತೀವ್ರ ಹೋರಾಟ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
- ಎಚ್‌ಪಿಸಿಎಲ್ ಬೆಂಗಳೂರು ಡರ್ಬಿ ಸಂಜೆ 4:25ಕ್ಕೆ ಪ್ರಾರಂಭ
-ಸ್ಪರ್ಧೆಯಲ್ಲಿ 6 ಗಂಡು ಸೇರಿದಂತೆ ಒಟ್ಟು 9 ಕುದುರೆಗಳು
- ಪ್ರಥಮ ಬಹುಮಾನ ಟ್ರೋಫಿಯೊಂದಿಗೆ ₹61.70 ಲಕ್ಷ ನಗದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.