ADVERTISEMENT

ಏಷ್ಯನ್‌ ಗೇಮ್ಸ್‌ಗೆ ಮುನ್ನ ನಿವೃತ್ತಿ ಬಗ್ಗೆ ಯೋಚಿಸಿದ್ದೆ: ಅನ್ನು ರಾಣಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 15:27 IST
Last Updated 15 ಅಕ್ಟೋಬರ್ 2023, 15:27 IST
ಅನ್ನು ರಾಣಿ
ಅನ್ನು ರಾಣಿ   

ನವದೆಹಲಿ: ಭಾರತದ ಜಾವೆಲಿನ್‌ ಥ್ರೋ ಪಟು ಅನ್ನು ರಾಣಿ ಅವರು ತನ್ನ ಕಳಪೆ ಪ್ರದರ್ಶನದಿಂದ ಬೇಸತ್ತು ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ಕ್ರೀಡೆಗೆ ವಿದಾಯ ಹೇಳಲು ಯೋಚಿಸಿದ್ದರಂತೆ. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಏಷ್ಯನ್‌ ಕ್ರೀಡಾಕೂಟದ ಮಹಿಳೆಯರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ 62.92 ಮೀ ಸಾಧನೆ ಮಾಡಿ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

‘ಈ ವರ್ಷ ನಾನು ಸಾಕಷ್ಟು ಹೋರಾಟ ನಡೆಸಿದೆ. ಅಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಅಲ್ಲಿ ವಿದೇಶಿ ಕೋಚ್‌ನಿಂದ ತರಬೇತಿ ಪಡೆದರೂ ಪ್ರದರ್ಶನದಲ್ಲಿ ಸುಧಾರಣೆಯಾಗಿರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಳಪೆ ಪ್ರದರ್ಶನದ ನಂತರ ಕ್ರೀಡೆಯನ್ನು ತೊರೆಯಲು ಯೋಚಿಸಿದ್ದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು ಅವರು ವಿಫಲವಾಗಿದ್ದರು. ಅರ್ಹತಾ ಸುತ್ತಿನಲ್ಲಿ 57.05 ಮೀ ದೂರ ಜಾವೆಲಿನ್‌ ಥ್ರೋ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲೂ 57.74 ಮೀಟರ್‌ ಜಾವೆಲಿನ್‌ ಎಸೆದು 7ನೇ ಸ್ಥಾನ ಪಡೆದಿದ್ದರು. ಪ್ರಸಕ್ತ ಋತುವಿನಲ್ಲಿ 60 ಮೀ ಗಡಿಯನ್ನು ದಾಟಲು ಅವರಿಗೆ ಸಾಧ್ಯವಾಗಿರಲಿಲ್ಲ. 

‘ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಅವಕಾಶ ತೆಗೆದುಕೊಳ್ಳುವ ನಿರ್ಧಾರ ಮನಸ್ಸಿನಲ್ಲಿ ಮೂಡಿತು. ಅಲ್ಲಿಯೂ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಒಲಿಂಪಿಕ್ಸ್‌ ಪದಕ ವಿಜೇತರೊಂದಿಗೆ ಸ್ಪರ್ಧೆ ಕಠಿಣವಾಗಿತ್ತು. ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಲ್ಲಿ ಪದಕ ಗೆಲ್ಲಲು ಸಾಧ್ಯವಾಯಿತು. ‌ಸದ್ಯ ಮುಂದಿನ ಒಲಿಂಪಿಕ್ಸ್‌ನತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.