ADVERTISEMENT

ಏಷ್ಯಾಡ್‌ ಹಾಕಿ: ಸೋಲಿನ ಕೂಪಕ್ಕೆ ಬಿದ್ದ ಭಾರತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಭಾರತದ ಆಟಗಾರರ ನಿರಾಸೆಯ ಕ್ಷಣ ಎಎಫ್‌ಪಿ ಚಿತ್ರ
ಭಾರತದ ಆಟಗಾರರ ನಿರಾಸೆಯ ಕ್ಷಣ ಎಎಫ್‌ಪಿ ಚಿತ್ರ   

ಜಕಾರ್ತ: ಗುಂಪು ಹಂತದ ಪಂದ್ಯಗಳಲ್ಲಿ ದಾಖಲೆಯ 76 ಗೋಲುಗಳನ್ನು ಗಳಿಸಿ ಮಿಂಚಿದ್ದ ಭಾರತ ಪುರುಷರ ಹಾಕಿ ತಂಡ ನಾಕೌಟ್ ಹಂತದಲ್ಲಿ ಮುಗ್ಗರಿಸಿತು. ಗುರುವಾರ ಮಲೇಷ್ಯಾ ಎದುರು ನಡೆದ ಸೆಮಿಫೈನಲ್ ಪಂದ್ಯದಲ್ಲಿ 6–7 (2–2)ರಿಂದ ಸೋತು ನಿರಾಸೆಯ ಕೂಪಕ್ಕೆ ಬಿದ್ದಿತು.

ಏಷ್ಯನ್ ಕೂಟದ ಚಿನ್ನ ಮತ್ತು ಮುಂದಿನ ಬಾರಿಯ ಒಲಿಂ‍ಪಿಕ್ಸ್‌ಗೆ ನೇರ ಪ್ರವೇಶದ ಗುರಿ ಇರಿಸಿಕೊಂಡು ನಾಲ್ಕರ ಘಟ್ಟದಲ್ಲಿ ಕಣಕ್ಕೆ ಇಳಿದ ಭಾರತಕ್ಕೆ ಮಲೇಷ್ಯಾ ತಂಡ ಆರಂಭದಿಂದಲೇ ಭಾರಿ ಪೈಪೋಟಿ ನೀಡಿತು. ನಿಗದಿತ ಅವಧಿ ಮುಕ್ತಾಯಗೊಂಡಾಗ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು.

ಹೀಗಾಗಿ ‍ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ಹಂತದಲ್ಲೂ ಸಮಬಲ ಸಾಧಿಸಿದ ಮಲೇಷ್ಯಾ ತಂಡ ಶ್ರೀಜೇಶ್‌ ಬಳಗಕ್ಕೆ ಕಗ್ಗಂಟಾಯಿತು. ಸಡನ್ ಡೆತ್‌ನಲ್ಲಿ ಗೆದ್ದ ಮಲೇಷ್ಯಾದ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ADVERTISEMENT

ನಿಗದಿತ ಅವಧಿಯಲ್ಲಿ, ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್‌ ಕ್ರಮವಾಗಿ 33 ಮತ್ತು 40ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. 39ನೇ ನಿಮಿಷದಲ್ಲಿ ಫೈಜಲ್ ಅವರು ಮಲೇಷ್ಯಾ ಪರ ಗೋಲು ಗಳಿಸಿದ್ದರು. ಆದರೆ ಅಂತಿಮ ನಿಮಿಷಗಳಲ್ಲಿ ರಾಜೀ ಗಳಿಸಿದ ಗೋಲು ಪಂದ್ಯದಲ್ಲಿ ಆ ತಂಡಕ್ಕೆ ಸಮಬಲ ತಂದುಕೊಟ್ಟಿತು.

ಸಡನ್ ಡೆತ್‌ನ ನಿರ್ಣಾಯಕ ಹಂತದಲ್ಲಿ ಎಸ್‌.ವಿ.ಸುನಿಲ್ ಅವರ ಪ್ರಯತ್ನವನ್ನು ತಡೆದು ಮಲೇಷ್ಯಾದ ಗೋಲ್ ಕೀಪರ್ ಮಿಂಚಿದರು.

ಮೂರನೇ ಸ್ಥಾನಕ್ಕಾಗಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಗುರುವಾರ ನಡೆದ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವು ಜಪಾನ್‌ಗೆ 0–1 ಅಂತರದಿಂದ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.