ADVERTISEMENT

ಏಷ್ಯಾ ಕಪ್‌ ಹಾಕಿಗೆ ತಂಡ ಪ್ರಕಟ: ಸ್ಥಾನ ಉಳಿಸಿಕೊಂಡ ಲಾಕ್ರಾ, ದಿಲ್‌ಪ್ರೀತ್‌

ಪಿಟಿಐ
Published 20 ಆಗಸ್ಟ್ 2025, 13:25 IST
Last Updated 20 ಆಗಸ್ಟ್ 2025, 13:25 IST
<div class="paragraphs"><p>ಹಾಕಿ</p></div>

ಹಾಕಿ

   

ನವದೆಹಲಿ: ಇದೇ ತಿಂಗಳ ಕೊನೆಯಲ್ಲಿ ಬಿಹಾರದ ರಾಜಗೀರ್‌ನಲ್ಲಿ ಆರಂಭವಾಗುವ ಏಷ್ಯಾ ಕಪ್‌ ಹಾಕಿ ಟೂರ್ನಿಗೆ 18 ಆಟಗಾರರ ಭಾರತ ಪುರುಷರ  ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ತಂಡದಲ್ಲಿ ಅಚ್ಚರಿಯ ಬದಲಾವಣೆಗಳೇನೂ ಆಗಿಲ್ಲ. ಮಿಡ್‌ಫೀಲ್ಡರ್‌ ರಾಜಿಂದರ್ ಸಿಂಗ್, ಮುನ್ಪಡೆ ಆಟಗಾರರಾದ ಶಿಲಾನಂದ ಲಾಕ್ರಾ ಮತ್ತು ದಿಲ್‌ಪ್ರೀತ್ ಸಿಂಗ್ ಸ್ಥಾನ ಉಳಿಸಿಕೊಂಡಿದ್ದಾರೆ.

ಟೂರ್ನಿಯು ಬಿಹಾರ ಆಗಸ್ಟ್ 29 ರಿಂದ ಸೆಪ್ಟೆಂಬರ್‌ 7ರವರೆಗೆ ನಡೆಯಲಿದೆ. ಏಷ್ಯಾ ಕಪ್ ವಿಜೇತ ತಂಡವು ಮುಂದಿನ ವರ್ಷದ ಆಗಸ್ಟ್‌ನಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಎಫ್‌ಐಎಚ್‌ ಪುರುಷರ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿದೆ. 

ADVERTISEMENT

ಅನುಭವಿ ಡ್ರ್ಯಾಗ್‌ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಅವರು ತಂಡದ ನಾಯಕರಾಗಿ ಮುಂದುವರಿದಿದ್ದಾರೆ. 

ರಾಜಿಂದರ್‌, ಲಾಕ್ರಾ ಮತ್ತು ದಿಲ್‌ಪ್ರೀತ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ತಂಡದಲ್ಲಿದ್ದರು. ರಾಜಿಂದರ್ ಅವರು ಶಂಶೇರ್ ಸಿಂಗ್ ಬದಲು, ಲಾಕ್ರಾ ಅವರು ಇತ್ತೀಚೆಗೆ ನಿವೃತ್ತರಾದ ಲಲಿತ್ ಉಪಾಧ್ಯಾಯ ಬದಲು, ದಿಲ್‌ಪ್ರೀತ್‌ ಅವರು ಗುರ್ಜಂತ್ ಸಿಂಗ್ ಸ್ಥಾನದಲ್ಲಿ ಅವಕಾಶ ಪಡೆದಿದ್ದಾರೆ.

ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ ನಂತರ ಜೂನ್‌ನಲ್ಲಿ ಉಪಾಧ್ಯಾಯ ಅವರು ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತರಾಗಿದ್ದರು.

ಆತಿಥೇಯ ಭಾರತವು, ಜಪಾನ್, ಚೀನಾ ಮತ್ತು ಕಜಾಕಸ್ತಾನ ತಂಡಗಳ ಜೊತೆ ‘ಎ’ ಗುಂಪಿನಲ್ಲಿದೆ. ಆ. 29ರಂದು ಚೀನಾವನ್ನು ಎದುರಿಸುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

‘ಅತಿ ಒತ್ತಡದ ಸನ್ನಿವೇಶದಲ್ಲಿ ಹೇಗೆ ಆಡಬೇಕೆಂದು ಅರ್ಥ ಮಾಡಿಕೊಳ್ಳಬಲ್ಲ ಅನುಭವಿ ತಂಡಕ್ಕೆ ಒತ್ತು ನೀಡಿದ್ದೇವೆ’ ಎಂದು ತಂಡದ ಆಯ್ಕೆಗೆ ಸಂಬಂಧಿಸಿ ಮುಖ್ಯ ಕೋಚ್‌ ಕ್ರೆಗ್ ಫುಲ್ಟನ್ ತಿಳಿಸಿದರು. ‘ವಿಶ್ವಕಪ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ನಮಗೆ ಏಷ್ಯಾ ಕಪ್ ಮಹತ್ವದ್ದು. ಹೀಗಾಗಿ ಶಾಂತಚಿತ್ತದ, ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ನಿರ್ಣಾಯಕ ಸ್ಥಿತಿಯಲ್ಲಿ ಹೇಗೆ ಆಡಬೇಕೆಂದು ಬಲ್ಲ ಆಟಗಾರರ ಆಯ್ಕೆ ಮಾಡಿದ್ದೇವೆ’ ಎಂದರು.

ತಂಡ ಹೀಗಿದೆ:

ಗೋಲ್‌ಕೀಪರ್ಸ್‌: ಕೃಷನ್ ಬಿ. ಪಾಠಕ್, ಸೂರಜ್ ಕರ್ಕೇರಾ. ಡಿಫೆಂಡರ್ಸ್‌: ಸುಮಿತ್‌, ಜರ್ಮನ್‌ಪ್ರೀತ್ ಸಿಂಗ್‌, ಸಂಜಯ್‌, ಹರ್ಮನ್‌ಪ್ರೀತ್ ಸಿಂಗ್‌, ಅಮಿತ್‌ ರೋಹಿದಾಸ್‌, ಜುಗರಾಜ್ ಸಿಂಗ್. ಮಿಡ್‌ಫೀಲ್ಡರ್ಸ್‌: ರಾಜಿಂದರ್ ಸಿಂಗ್‌, ರಾಜಕುಮಾರ್ ಪಾಲ್‌, ಹಾರ್ದಿಕ್‌ ಸಿಂಗ್‌, ಮನ್‌ಪ್ರೀತ್ ಸಿಂಗ್, ವಿವೇಕಸಾಗರ ಪ್ರಸಾದ್.

ಫಾರ್ವರ್ಡ್ಸ್‌: ಮನದೀಪ್‌ ಸಿಂಗ್, ಶಿಲಾನಂದ ಲಾಕ್ರಾ, ಅಭಿಷೇಕ್, ಸುಖಜೀತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್.

ಮೀಸಲು: ನೀಲಮ್ ಸಂಜೀಪ್‌ ಕ್ಸೆಸ್‌, ಸೆಲ್ವಂ ಕಾರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.