ADVERTISEMENT

ಡಬಲ್ಸ್‌ ಆಕರ್ಷಣೆಯೂ ಈಗ ದುಪ್ಪಟ್ಟು: ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ ಸಂತಸ

ಗಿರೀಶ ದೊಡ್ಡಮನಿ
Published 4 ಫೆಬ್ರುವರಿ 2024, 4:29 IST
Last Updated 4 ಫೆಬ್ರುವರಿ 2024, 4:29 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉದಯೋನ್ಮುಖ ಆಟಗಾರರೊಂದಿಗೆ ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ  –ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್
ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉದಯೋನ್ಮುಖ ಆಟಗಾರರೊಂದಿಗೆ ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ  –ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ದನ್   

ಬೆಂಗಳೂರು: ಕೆಲವು ವರ್ಷಗಳ ಹಿಂದಷ್ಟೇ ಭಾರತದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಡಬಲ್ಸ್‌ ವಿಭಾಗದ ಪಂದ್ಯಗಳಿಗೆ ಅಷ್ಟೇನೂ ಆಕರ್ಷಣೆ ಇರುತ್ತಿರಲಿಲ್ಲ. ಸಿಂಗಲ್ಸ್‌ ಆಟಗಾರರಿಗೆ ಸಿಗುತ್ತಿದ್ದ ತಾರಾಪಟ್ಟ ಕೂಡ ಜೋಡಿ ಆಟಗಾರರಿಗೆ ಸಿಗುತ್ತಿರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಸ್ಥಿತಿ ಬದಲಾಗಿದೆ. ಯಾವುದೇ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಇರಲಿ; ಸಿಂಗಲ್ಸ್‌ ಪಂದ್ಯಗಳಷ್ಟೇ ಡಬಲ್ಸ್‌ ಆಟಕ್ಕೂ ಆಕರ್ಷಣೆ ಬೆಳೆದಿದೆ.

ಅದಕ್ಕೆ ಪ್ರಮುಖ ಕಾರಣ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯ ಯಶಸ್ಸು. ಶನಿವಾರ ಉದ್ಯಾನನಗರಿಯಲ್ಲಿ ನಿಪೊ ಪೇಂಟ್ಸ್‌ ಏರ್ಪಡಿಸಿದ್ದ ಮೀಟ್ ಅ್ಯಂಡ್ ಗ್ರೀಟ್ ಕಾರ್ಯಕ್ರಮಕ್ಕೆ ಬಂದಿದ್ದ ಚಿರಾಗ್ ಅವರ ಸುತ್ತ ಅಭಿಮಾನಿಗಳ ದೊಡ್ಡ ದಂಡು ಸೇರಿತ್ತು. ಟೀಶರ್ಟ್, ಕ್ಯಾಪ್, ರೆಕೆಟ್ ಮತ್ತು ಶಟಲ್‌ ಕಾಕ್‌ಗಳ ಮೇಲೆ ಅವರಿಂದ ಹಸ್ತಾಕ್ಷರ ಪಡೆದವರು ಹಲವರು. ಸೆಲ್ಫಿ ಕ್ಲಿಕ್ಕಿಸಿಕೊಂಡವರಿಗೇನೂ ಕಮ್ಮಿಯಿಲ್ಲ. ಇದರ ಮಧ್ಯೆಯೇ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಾರ ಇಲ್ಲಿದೆ.

‘ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಡಬಲ್ಸ್‌ ವಿಭಾಗದ ಅಟಕ್ಕೆ ಮೊದಲಿನಿಂದಲೂ ಆಕರ್ಷಣೆ ಕಡಿಮೆ. ನಾನು ಆಡಲು ಆರಂಭಿಸಿದಾಗಲೂ ಅದೇ ರೀತಿ ಇತ್ತು. ವಿಶ್ವ ಚಾಂಪಿಯನ್‌ಪಿಪ್‌ನಲ್ಲಿ ಕಂಚು ಗೆದ್ದ ಭಾರತದ ಮೊದಲ ಜೋಡಿ ನಮ್ಮದು. ನಂತರ ಹಲವು ಟೂರ್ನಿಗಳಲ್ಲಿ ಸಾಧಿಸಿದ ಯಶಸ್ಸಿನಿಂದಾಗಿ ಜನಮನ್ನಣೆ ಹೆಚ್ಚುತ್ತಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಹೆಚ್ಚು ಮಂದಿ ಡಬಲ್ಸ್‌ನತ್ತ ಬರುವ ಭರವಸೆ ಮೂಡಿದೆ’ ಎಂದರು.

ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌, ಏಷ್ಯನ್ ಗೇಮ್ಸ್ ಹಾಗೂ ಥಾಮಸ್ ಕಪ್ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಲ್ಲಿ ಈ ಜೋಡಿಯು ಪದಕ ಸಾಧನೆ ಮಾಡಿದೆ. ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟರು.

‘ನನ್ನ ಹಾಗೂ ಸಾತ್ವಿಕ್ ನಡುವೆ ಉತ್ತಮ ಹೊಂದಾಣಿಕೆ ಇದೆ. ಅವರಲ್ಲಿರುವ ಸಹನೆ ಮತ್ತು ಸ್ನೇಹದ ಗುಣವನ್ನು ನಾನು ಸದಾ ಗೌರವಿಸುತ್ತೇನೆ. ಅವರು ಕೂಡ ನನ್ನ ನಿರ್ಧಾರಗಳನ್ನು ಮತ್ತು ಸಲಹೆಗಳನ್ನು ಒಪ್ಪಿಕೊಳ್ಳುತ್ತಾರೆ. ದೇಶಕ್ಕೆ ಗೆಲುವಿನ ಕಾಣಿಕೆ ನೀಡುವ ಒಂದೇ ಗುರಿ ಮತ್ತು ಮನೋಭಾವ ನಮ್ಮಲ್ಲಿದೆ. ಆದ್ದರಿಂದ ಇಷ್ಟು ದೂರ ಬಂದಿದ್ದೇವೆ. ಇದು ಒಲಿಂಪಿಕ್ ವರ್ಷ. ನಮ್ಮ ಸಿದ್ಧತೆಗಳು ಬಹಳ ಗಂಭೀರವಾಗಿ ಸಾಗುತ್ತಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದು ನಮ್ಮ ಗುರಿ’ ಎಂದರು.

‘ಗೆಲುವಿನ ನಂತರ  ಡ್ಯಾನ್ಸ್ ಮಾಡಿ ಸಂಭ್ರಮಿಸುವುದು ಪೂರ್ವನಿಯೋಜಿತವೇನೂ ಆಗಿರಲಿಲ್ಲ. ಥಾಮಸ್ ಕಪ್ ಗೆದ್ದ ಸಂದರ್ಭದಲ್ಲಿ ನಾನು ಜೆರ್ಸಿ ತೆಗೆದುಹಾಕಿ ನರ್ತಿಸಿದೆ. ಸಾತ್ವಿಕ್ ಜೊತೆ ನೀಡಿದರು. ಅದು ನಮ್ಮ ಸಂತಸದ ಭರದಿಂದ ಬಂದಿದ್ದು. ಈಗ ಅದು ನಮ್ಮ ಸಂಭ್ರಮದ ಶೈಲಿಯೇ ಆಗಿಬಿಟ್ಟಿದೆ’ ಎಂದರು.

‘ನನಗೂ ಕರ್ನಾಟಕಕ್ಕೂ ಬಹಳ ನಂಟಿದೆ.  ಮಂಗಳೂರು ನಮ್ಮ ಕುಟುಂಬದ ಮೂಲ ಊರು. ಬಾಲ್ಯದಲ್ಲಿ  ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ಇಲ್ಲಿಗೆ ಬರುವುದೆಂದರೆ ನನಗೆ ಯಾವಾಗಲೂ ಸಂತೋಷ. ಈ ಊರಿನಲ್ಲಿ ಬಹಳಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳಿವೆ. ಅವರ ಬೆಳವಣಿಗೆ ನೋಡಲು ಸಂತಸವಾಗುತ್ತಿದೆ’ ಎಂದು ಚಿರಾಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.