ಚಿನ್ನದ ಪದಕ ಗೆದ್ದ ಮಧುರಾ ಧಾಮಣಗಾಂವಕರ್
ಎಕ್ಸ್ ಚಿತ್ರ
ಶಾಂಘೈ: ಉದಯೋನ್ಮುಖ ಬಿಲ್ಗಾರ್ತಿ ಮಧುರಾ ಧಾಮಣಗಾಂವಕರ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಸ್ಟೇಜ್ 2 ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದರು. ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಬಾಚಿಕೊಂಡಿರುವ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಶ್ರೇಯಾಂಕರಹಿತ ಆಟಗಾರ್ತಿ 24 ವರ್ಷ ವಯಸ್ಸಿನ ಮಧುರಾ ಶನಿವಾರ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ 139-138 ಅಂತರದಿಂದ ಅಮೆರಿಕದ ಕಾರ್ಸನ್ ಕ್ರಾಹೆ ಅವರನ್ನು ಸೋಲಿಸಿದರು. ಅಮರಾವತಿಯ ಮಧುರಾ ಬೆಳ್ಳಿ ಗೆದ್ದ ಮಹಿಳೆಯರ ತಂಡದ ಮತ್ತು ಕಂಚು ಗೆದ್ದ ಮಿಶ್ರ ತಂಡದ ಭಾಗವಾಗಿದ್ದಾರೆ.
ಮೊದಲ ಸರಣಿಯಲ್ಲಿ ಪೂರ್ಣ 30 ಅಂಕಗಳೊಂದಿಗೆ ಉತ್ತಮ ಆರಂಭ ಪಡೆದಿದ್ದ ಮಧುರಾ ನಂತರದಲ್ಲಿ ಗುರಿ ತಪ್ಪಿದರು. ಹೀಗಾಗಿ, ಮೂರನೇ ಸರಣಿಯ ಅಂತ್ಯದಲ್ಲಿ 81–85ರ ಹಿನ್ನಡೆ ಕಂಡಿದ್ದರು. ಕಳೆದ ವರ್ಷ ಕಂಚು ವಿಜೇತ ವಿಶ್ವಕಪ್ ತಂಡದಲ್ಲಿದ್ದ ಕಾರ್ಸೆನ್ ಅಗ್ರಸ್ಥಾನ ಪಡೆಯುವತ್ತ ಸಾಗಿದ್ದರು. ಆದರೆ, ಕೊನೆ ಸರಣಿಯಲ್ಲಿ ಅದ್ಭುತವಾಗಿ ಲಯ ಕಂಡುಕೊಂಡ ಮಧುರಾ ಒಂದು ಪಾಯಿಂಟ್ ಅಂತರದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು.
ಪುರುಷರ ತಂಡಕ್ಕೆ ಚಿನ್ನ: ಇದಕ್ಕೂ ಮುನ್ನ ನಡೆದ ಪುರುಷರ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮಾ, ಓಜಸ್ ದೇವತಾಳೆ ಮತ್ತು ರಿಷಭ್ ಯಾದವ್ ಅವರು ಚಿನ್ನದ ಸಾಧನೆ ಮಾಡಿದರು.
ಭಾರತದ ಅನುಭವಿ ಬಿಲ್ಗಾರರನ್ನು ಒಳಗೊಂಡ ತಂಡವು ಫೈನಲ್‌ನಲ್ಲಿ 232-228 ಅಂಕಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು.
ಅಗ್ರ ಶ್ರೇಯಾಂಕಿತ ಭಾರತ ತಂಡವು 59–57 ಅಂಕಗಳೊಂದಿಗೆ ಉತ್ತಮ ಆರಂಭ ಪಡೆದು, ಮಧ್ಯಂತರದ ವೇಳೆಗೆ 115-115ಕ್ಕೆ ಸಮಬಲ ಸಾಧಿಸಿತ್ತು. ಆದರೆ, ಮೂರನೇ ಮತ್ತು ನಾಲ್ಕನೇ ಸರಣಿಯಲ್ಲಿ ಕ್ರಮವಾಗಿ 58 ಮತ್ತು 59 ಅಂಕ ಪಡೆದು ಮೇಲುಗೈ ಸಾಧಿಸಿತು. ಕೊನೆಯ ಸರಣಿಯಲ್ಲಿ ಮೆಕ್ಸಿಕೊ 56 ಅಂಕ ಪಡೆಯಲಷ್ಟೇ ಶಕ್ತವಾಯಿತು.
ಯಾದವ್‌ಗೆ ಕಂಚು: 22 ವರ್ಷ ವಯಸ್ಸಿನ ರಿಷಭ್ ಯಾದವ್, ಕಂಚಿನ ಪದಕಕ್ಕಾಗಿ ನಡೆದ ನಾಟಕೀಯ ಶೂಟ್‌ಆಫ್‌ನಲ್ಲಿ 145-145 (10*-10)ರಿಂದ ದಕ್ಷಿಣ ಕೊರಿಯಾದ ಕಿಮ್ ಜೊಂಗ್ಹೋ ಅವರನ್ನು ಸೋಲಿಸಿ, ತಮ್ಮ ಚೊಚ್ಚಲ ವೈಯಕ್ತಿಕ ವಿಶ್ವಕಪ್ ಪದಕ ಗೆದ್ದರು.
ಮೊದಲ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದ ಯಾದವ್ ನಂತರದ ಎರಡು ಸರಣಿಯನ್ನು ಕಳೆದುಕೊಂಡರು. ಆದರೆ, ನಾಲ್ಕನೇ ಸರಣಿಯಲ್ಲಿ ಪುಟಿದೆದ್ದು ಪೂರ್ಣ ಅಂಕದೊಂದಿಗೆ 115–115 ಸಮಬಲ ಸಾಧಿಸಿದರು. ಕೊನೆಯ ಸುತ್ತಿನಲ್ಲೂ ಇಬ್ಬರೂ ತಲಾ ಪೂರ್ಣ 30 ಅಂಕ ಗಳಿಸಿದರು. ಆದರೆ, ಶೂಟ್‌ಆಫ್‌ನಲ್ಲಿ ಯಾದವ್ ಗುರಿ ನಿಖರವಾಗಿದ್ದರಿಂದ ಪದಕ ಗೆದ್ದರು.
ಮಹಿಳಾ ತಂಡಕ್ಕೆ ಬೆಳ್ಳಿ: ಮಧುರಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಚಿಕಿತಾ ತನಿಪರ್ತಿ ಅವರನ್ನು ಒಳಗೊಂಡ ಭಾರತ ತಂಡವು ಫೈನಲ್‌ನಲ್ಲಿ 221-234 ರಿಂದ ಬಲಿಷ್ಠ ಮೆಕ್ಸಿಕೊ ವಿರುದ್ಧ ಸೋತ ನಂತರ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿತು.
ಫೈನಲ್‌ನಲ್ಲಿ ಏಕಪಕ್ಷೀಯ ಫಲಿತಾಂಶದ ಹೊರತಾಗಿಯೂ ಭಾರತ ತಂಡವು ಟೂರ್ನಿಯುದ್ದಕ್ಕೂ ಸ್ಫೂರ್ತಿಯುವ ಪ್ರದರ್ಶನ ನೀಡಿತು. ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿತ್ತು.
ಮಧುರಾ ಮತ್ತು ಅಭಿಷೇಕ್ ಅವರು ಕಾಂಪೌಂಡ್ ಮಿಶ್ರ ವಿಭಾಗದ ಕಂಚಿನ ಪ್ಲೇ ಆಫ್ ಸುತ್ತಿನಲ್ಲಿ 144-142 ಅಂತರದಿಂದ ಮಲೇಷ್ಯಾ ತಂಡವನ್ನು ಮಣಿಸಿದರು.
ಕೂಟದ ಅಂತಿಮ ದಿನವಾದ ಭಾನುವಾರ ರಿಕರ್ವ್ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಭಾರತ ಇನ್ನೂ ಮೂರು ಪದಕಗಳ ನಿರೀಕ್ಷೆಯಲ್ಲಿದೆ.
ವೈಯಕ್ತಿಕ ವಿಭಾಗದಲ್ಲಿ ಪಾರ್ಥ ಸಾಲುಂಖೆ ಮತ್ತು ದೀಪಿಕಾ ಕುಮಾರಿ ಅವರು ಈಗಾಗಲೇ ಸೆಮಿಫೈನಲ್ ತಲುಪಿದ್ದಾರೆ. ಮತ್ತೊಂದೆಡೆ ಭಾರತ ಪುರುಷರ ತಂಡ ಕಂಚಿನ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.